ಸಿದ್ದು ಕಡೆಗಣಿಸುವ ಪ್ರಶ್ನೆಯೇ ಇಲ್ಲ : ಡಿಕೆಶಿ

 ಬೆಂಗಳೂರು:

      ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

      ಉಪಾಹಾರ ಕೂಟಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದಿರುವ ವಿಚಾರದ ಬಗ್ಗೆ ಸ್ಪಷ್ಟಪಡಿಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿಯೇ ಉಪಹಾರ ಕೂಟದ ಬಗ್ಗೆ ಚರ್ಚಿಸಿ ನಿರ್ಧರಿಸಲಾಗಿದೆ. ಅವರ ಸಲಹೆ ಸೂಚನೆಯಂತೆ ಸಭೆಯನ್ನು ಕರೆಯಲಾಗಿತ್ತು. ಆದರೆ, ಎಲ್ಲದಕ್ಕೂ ಅವರನ್ನು ಕರೆಯಲು ಸಾಧ್ಯವಿಲ್ಲ,ಅವರನ್ನು ಯಾವಾಗ ಕರೆಯಬೇಕೋ ಆವಾಗ ಕರೆಯುತ್ತೇನೆ ಎಂದು ಉಪಾಹಾರದ ಬಳಿಕ ಹೇಳಿದರು. 

      ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಅಧಿಕೃತ ಸರ್ಕಾರಿ ನಿವಾಸದಲ್ಲಿ ಆಯೋಜಿಸಲಾಗಿದ್ದ, ಈ ಉಪಾಹಾರ ಕೂಟದಲ್ಲಿ 16 ಮಂದಿ ಸಚಿವರ ಪೈಕಿ 13 ಮಂದಿ ಸಚಿವರು ಭಾಗವಹಿಸಿದ್ದರು. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ರಮೇಶ್ ಜಾರಕಿ ಹೊಳಿ, ಸಚಿವ ರಾಜಶೇಖರ ಪಾಟಿಲ್ ಅವರು ಈ ಔತಣಕೂಟಕ್ಕೆ ಗೈರಾಗಿದ್ದರು. ಇದೇ ಸಂದರ್ಭದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ, ಮುಂಬೈನಲ್ಲಿ ಕಾರ್ಯಕ್ರಮವಿರುವುದರಿಂದ ಈ ಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರು.

      ಸಚಿವ ರಾಜಶೇಖರ ಪಾಟೀಲ ಅವರು ವಿದೇಶ ಪ್ರವಾಸದಲ್ಲಿದ್ದಾರೆ ಹಿರಿಯ ಸಚಿವರ ಸಲಹೆಯಂತೆ ಇಡಿ, ಐಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಬಿಜೆಪಿ ನಾಯಕರು ಡಿ.ಕೆ.ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿ, ಅವರಿಗೆ ಹೆಚ್ಚಿನ ಕಾಟ ಕೊಡುವುದರಿಂದ ಕಾಂಗ್ರೆಸ್ ನಾಯಕರು ಅವರ ಬೆನ್ನಿಗೆ ನಿಲ್ಲಬೇಕಾಗಿದೆ ಎಂದರು.

      ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಆರ್.ವಿ.ದೇಶಪಾಂಡೆ, ಜಮೀರ್‍ಅಹಮದ್, ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ