ಚೆನ್ನೈ:
ಸಿದ್ಧಗಂಗಾ ಮಠದ ಡಾ. ಶಿವಕುಮಾರ ಶ್ರೀಗಳಿಗೆ ಇಂದು(ಶನಿವಾರ) ಬೆಳಗ್ಗೆ ಚೆನ್ನೈನ ಡಾ. ರೇಲಾ ಇನ್ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್ನಲ್ಲಿ ಪಿತ್ತನಾಳದ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆ ಇದೆ.
ಮೇದೋಜೀರಕ ಗ್ರಂಥಿಯಿಂದ ಪಿತ್ತಕೋಶಕ್ಕೆ ಹೋಗಬೇಕಾದ ನೀರಿನ ಅಂಶ ಸರಾಗವಾಗಿ ಹೋಗುತ್ತಿರಲಿಲ್ಲ. ಸರಾಗವಾಗಿ ಹೋಗಲು 11 ಸ್ಟೆಂಟ್ ಗಳನ್ನು ಅಳವಡಿಸಲಾಗಿದೆ. ಇಷ್ಟಾದರೂ ಮೇದೋಜ್ಜೀರಕ ಗ್ರಂಥಿಯಿಂದ ಹೋಗುತ್ತಿದ್ದ ನೀರಿನ ಅಂಶ ಗಟ್ಟಿಯಾಗಿ ನಿಲ್ಲುತ್ತಿತ್ತು. ಪರಿಣಾಮವಾಗಿ ಆ ಭಾಗದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಈಗ ಇದನ್ನು ಸರಿಪಡಿಸಲು ಬೈಪಾಸ್ ಸರ್ಜರಿ ಅಗತ್ಯವಿದೆ.
ಆಪರೇಷನ್ ಮಾಡುವಾಗ ಶ್ರೀಗಳಿಗೆ ಕನಿಷ್ಟ 3 ಗಂಟೆ ಅನೆಸ್ತೇಷಿಯ ನೀಡಬೇಕು. ಅಷ್ಟು ಅವಧಿ ದೇಹ ತಡೆಯುತ್ತದೆಯೇ ಎಂಬುವುದೇ ಸದ್ಯಕ್ಕಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ ಸಿಂಗಾಪುರ ಮುಂತಾದ ದೇಶಗಳ ವೈದ್ಯರೊಂದಿಗೆ ಚೆನ್ನೈ ವೈದ್ಯರು ಟೆಲಿಕಾನ್ಫರೆನ್ಸ್ ನಡೆಸುವ ಸಾಧ್ಯತೆ ಇದೆ.
ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮೂರರಿಂದ ನಾಲ್ಕು ದಿನ ಚೆನ್ನೈನಲ್ಲೇ ಚಿಕಿತ್ಸೆ ನೀಡಬೇಕಾಗಬಹುದು ಎಂದು ಶ್ರೀಗಳ ಆಪ್ತ ವೈದ್ಯರಾದ ಡಾ.ಪರಮೇಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ