ಬೆಂಗಳೂರು :
ಸೆಪ್ಟೆಂಬರ್ 28ರಿಂದ ಪ್ರಾರಂಭವಾಗಲಿರುವ ದಸರಾ ಮಹೋತ್ಸವದ ಉದ್ಘಾಟನೆ ಮಾಡುವಂತೆ ಸಾಹಿತಿ ಎಸ್.ಎಲ್. ಭೈರಪ್ಪನವರಿಗೆ ಸರ್ಕಾರ ಆಹ್ವಾನ ನೀಡಲು ನಿರ್ಧರಿಸಿದೆ.
ನಮ್ಮ ನಾಡಹಬ್ಬವಾದ ದಸರಾ ಹಬ್ಬದ ಸಿದ್ಧತೆ ಕುರಿತು ಚರ್ಚಿಸಲು ಸಿಎಂ ಬಿ.ಎಸ್ ಯಡಿಯೂರಪ್ಪನವರೇ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ಕರೆದಿದ್ದರು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆದ ಸಭೆಯಲ್ಲಿ ಮೈಸೂರು ಭಾಗದ ಬಿಜೆಪಿ ಸಂಸದರು ಮತ್ತು ಶಾಸಕರು ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ಭೈರಪ್ಪನವರ ಹೆಸರು ಪ್ರಸ್ತಾಪವಾದ ಕಾರಣ, ಅವರನ್ನೇ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
2014ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ವರ್ಷ ದಸರಾ ಮಹೋತ್ಸವ ಸಿದ್ಧತೆ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಮೈಸೂರಿನವರೇ ಆದ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡುವಂತೆ ಒತ್ತಾಯ ಮಾಡಿದ್ದರು. ಬಿಜೆಪಿಯ ವಿರೋಧದ ನಡುವೆ ದಸರಾ ಉದ್ಘಾಟನೆಗೆ ನಾಟಕಕಾರ ಡಾ.ಗಿರೀಶ್ ಕಾರ್ನಾಡರನ್ನು ಸರ್ಕಾರ ಆಯ್ಕೆ ಮಾಡಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲೂ ವಿರೋಧ ವ್ಯಕ್ತವಾಗಿ ಅಲ್ಲಲ್ಲಿ ಪ್ರತಿಭಟನೆಗಳೂ ನಡೆದಿದ್ದವು.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, “20.5 ಕೋಟಿ ಹಣವನ್ನು ದಸರೆಗೆ ಬಿಡುಗಡೆ ಮಾಡಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಇದೆ. ಹಾಗೇ ರಾಜ್ಯದ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದ ಅಪಾರ ಹಾನಿಯುಂಟಾದ ಕಾರಣ ಈ ಬಾರಿ ಅದ್ಧೂರಿ ದಸರಾ ಮಹೋತ್ಸವ ಬೇಡ. ಸಾಂಪ್ರದಾಯಿಕ ಆಚರಣೆಗೆ ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ