ಬೆಂಗಳೂರು:
ಈಗಾಗಲೇ ನಿಗಧಿಯಾಗಿದ್ದ ಪ್ರಥಮ ಪಿಯುಸಿ ಪೂರಕ ಪರೀಕ್ಷೆಗಳನ್ನು ಕೋವಿಡ್-19 ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಎಸ್. ಸುರೇಶ್ ಕುಮಾರ್, ಕೊರೊನಾ ಸೋಂಕು ದಿನೇ ದಿನೇ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದೇ 16 ರಿಂದ 27ರವರೆಗೆ ನಿಗಧಿಯಾಗಿದ್ದ ಪ್ರಥಮ ಪಿಯುಸಿ ಪೂರಕ(ಸಪ್ಲಿಮೆಂಟರಿ) ಪರೀಕ್ಷೆಯನ್ನು ರದ್ದು ಪಡಿಸಲಾಗಿದೆ.
‘ಪರೀಕ್ಷೆಯಲ್ಲಿ ಉತ್ತೀರ್ಣತೆಯನ್ನು ಪಡೆಯಲು ಅವಶ್ಯಕತೆಯಿರುವ ಕನಿಷ್ಠ ಅಂಕಗಳನ್ನು ಕಾಲೇಜು ಹಂತದಲ್ಲಿಯೇ ನೀಡಲಾಗುವುದು. ಹಾಜರಾತಿ ಕೊರತೆಯಿಲ್ಲದ, ಅನಿವಾರ್ಯ ಸಂದರ್ಭದಲ್ಲಿ ಪರೀಕ್ಷೆಗೆ ಗೈರುಹಾಜರಾದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳು ಪ್ರಾರಂಭವಾದ ಬಳಿಕ ದ್ವಿತೀಯ ಪಿಯುಸಿಯ ಪ್ರಥಮ ಕಿರುಪರೀಕ್ಷೆಗೂ ಪೂರ್ವದಲ್ಲಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣವಾದ ವಿಷಯಗಳಿಗೆ ಮತ್ತೊಮ್ಮೆ ಕಾಲೇಜು ಹಂತದಲ್ಲಿ ಕಿರುಪರೀಕ್ಷೆಯನ್ನು ನಡೆಸಿ ಅವರ ಕಲಿಕೆಯ ಮಟ್ಟವನ್ನು ಮೌಲ್ಯಮಾಪನ ಮಾಡಲಾಗುವುದೆಂದು ಸಚಿವರು ಹೇಳಿದ್ದಾರೆ.