ಬೆಳಗಾವಿ:
ಬಾಲಗಕೋಟೆ ಜಿಲ್ಲೆಯ ಕಬ್ಬು ಬೆಳೆಗಾರರ ಪ್ರತಿಭಟನೆ 2ನೇ ದಿನವೂ ಮುಂದುವರೆದಿದೆ. ಶುಕ್ರವಾರ ಮುಧೋಳ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದ್ದರು. ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದರು.
ಕಬ್ಬಿನ ಬಾಕಿ ಪಾವತಿ ಮತ್ತು ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ನಡೆಸುತ್ತಿರುವ ರೈತರ ಪ್ರತಿಭಟನೆಯು ಉಗ್ರ ಸ್ವರೂಪಕ್ಕೆ ತಿರುಗಿದ್ದು, ಕಬ್ಬಿನ ಲಾರಿ ಜತೆ ಸುವರ್ಣ ವಿಧಾನಸೌಧಕ್ಕೆ ರೈತರು ಮುತ್ತಿಗೆ ಹಾಕಿದ್ದಾರೆ.
ಕಬ್ಬು ಬೆಳೆಗಾರರ ಸಮಸ್ಯೆಯನ್ನು ಆಲಿಸಿ ಪರಿಹಾರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಭರವಸೆ ನೀಡಿದ್ದಾರೆ. ರೈತ ಮುಖಂಡರ ಜೊತೆ ಸಭೆ ನಡೆಸಲು ಒಪ್ಪಿಗೆ ನೀಡಿದ್ದಾರೆ. ಆದರೆ, ಶನಿವಾರ ರೈತರು ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ವಿವಿಧ ಕಡೆ ಪ್ರತಿಭಟನೆ ನಡೆಸಿದರು. ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಬಳಿ 200ಕ್ಕೂ ಹೆಚ್ಚು ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್‌ಗಳನ್ನು ತಡೆದು ನಿಲ್ಲಿಸಿದರು.
ಬೆಳಗಾವಿಯಲ್ಲಿ ರೈತರೊಂದಿಗೆ ನಡೆಯಬೇಕಿದ್ದ ಸಭೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರದ್ದು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳಗಾವಿ ಸುವರ್ಣಸೌಧದ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.
ಬೆಳಗಾವಿಯ ಕಾಗವಾಡದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದ್ದು, ಕೆಂಪವಾಡ ಫಾರ್ಮರ್ಸ್ ಶುಗರ್ಸ್ ಕಬ್ಬಿನ ಕಾರ್ಖಾನೆಗೆ ಹೊರಟಿದ್ದ ಟ್ರ್ಯಾಕ್ಟರ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ರಸ್ತೆಯುದ್ದಕ್ಕೂ ಸಾಲುಗಟ್ಟಿ ಟ್ರಾಕ್ಟರ್ಗಳು ನಿಂತಿದ್ದು, ಸಂಕೇಶ್ವರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮುಧೋಳ ತಾಲೂಕಿನ 4 ಸಕ್ಕರೆ ಕಾರ್ಖಾನೆಗಳ ಪೈಕಿ ಮೂರು ಕಾರ್ಖಾನೆಗಳು ಇದುವರೆಗೂ ಕಬ್ಬು ನುರಿಸುವ ಕೆಲಸವನ್ನು ಆರಂಭಿಸಿಲ್ಲ. ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಆರಂಭವಾಗಿದ್ದು, ಸ್ಥಗಿತಗೊಳಿಸುವಂತೆ ಆಡಳಿತ ಮಂಡಳಿಗೆ ರೈತರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
