ಬೆಂಗಳೂರು:
ಸೋಷಿಯಲ್ ಮೀಡಿಯಾ ಮೂಲಕ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಸದ್ಯ ತಮ್ಮ ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.
ಶನಿವಾರ ಬೆಳಗ್ಗೆಯಿಂದ ಸ್ಪಂದನಾರ ಟ್ವಿಟರ್ ಖಾತೆಯಲ್ಲಿ ಯಾವುದೇ ಟ್ವೀಟ್‌ಗಳು ಕಾಣಿಸಿಕೊಂಡಿಲ್ಲ. ಅವರ ಟ್ವಿಟರ್ ಬಯೋದಲ್ಲಿ ಅವರು ಕಾಂಗ್ರೆಸ್ ಸಾಮಾಜಿಕ ತಾಣದ ಮುಖ್ಯಸ್ಥರು ಎಂದು ನಮೂದಿಸಲಾಗಿಲ್ಲ. ಪ್ರೊಫೈಲ್ ಪೇಜ್‌ನಲ್ಲಿ ‘ಈ ಖಾತೆ ಅಸ್ತಿತ್ವದಲ್ಲಿಲ್ಲ” ಎಂದು ಬರೆಯಲಾಗಿದೆ. ರಮ್ಯ ತಮ್ಮ ಟ್ವಿಟರ್ ಖಾತೆಗೆ ಸುಮಾರು ಹತ್ತು ಲಕ್ಷ ಹಿಂಬಾಲಕರನ್ನು ಹೊಂದಿದ್ದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಹಿನ್ನೆಲೆ, ತಮ್ಮ ಟ್ವೀಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಅವರ ಖಾತೆಯಲ್ಲಿದ್ದ ಎಲ್ಲಾ ಸಂದೇಶಗಳನ್ನು ಅಳಿಸಿ ಹಾಕಿದ್ದಾರೆ. ಇದರಿಂದ ಯಾವುದೇ ಸಂದೇಶಗಳು ಸಹ ತೋರುತ್ತಿಲ್ಲ. ಯಾವ ಕಾರಣದಿಂದಾಗಿ ಸಂದೇಶಗಳನ್ನು ಡಿಲೀಟ್ ಮಾಡಿದ್ದಾರೆ ಎಂದೂ ಸಹ ತಿಳಿದುಬಂದಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನದ ಬಳಿಕ ಪಕ್ಷದ ಯಾರೂ ಸಹ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಹೈಕಮಾಂಡ್ ಕಟ್ಟಪ್ಪಣೆ ಮಾಡಿದೆ. ಇದರ ಬೆನ್ನಲ್ಲೇ ರಮ್ಯಾ ಟ್ವಿಟರ್ ಅಕೌಂಟ್ ಡಿಲೀಟ್ ಮಾಡಿದ್ದು, ಸದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ