ಬೆಂಗಳೂರು:
ದಕ್ಷಿಣ ಆಫ್ರಿಕಾದ ಸೆನೆಗಲ್ ನಲ್ಲಿ ಬಂಧಿತನಾಗಿದ್ದ ಭೂಗತಬಪಾತಕಿ ರವಿ ಪೂಜಾರಿಯನ್ನು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಸೋಮವಾರ ನಸುಕಿನಲ್ಲಿ ಸೆನೆಗಲ್ ನಿಂದ ಬೆಂಗಳೂರಿಗೆ ಕರೆ ತರುವಲ್ಲಿ ಸಫಲರಾಗಿದ್ದಾರೆ.
ರವಿ ಪೂಜಾರಿಯನ್ನು ಭಾರತಕ್ಕೆ ಕರೆತರಲು ಸುಮಾರು ಒಂದು ವರ್ಷದಿಂದ ರಾಜ್ಯ ಪೊಲೀಸ್ ಇಲಾಖೆ ಹಾಗೂ ಕೇಂದ್ರದ ತನಿಖಾ ಸಂಸ್ಥೆಗಳು ನಿರಂತರ ಪ್ರಯತ್ನ ಮಾಡಿತ್ತು. ಇದೀಗ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಪೊಲೀಸ್ ತಂಡವು ರವಿ ಪೂಜಾರಿಯನ್ನು ಪೂಜಾರಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದೆ.
ರಾಜ್ಯದಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದ ರವಿಪೂಜಾರಿ 1990ರಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಲವಾರು ಪ್ರಕರಣಗಳು ಪೂಜಾರಿ ವಿರುದ್ದ ದಾಖಲಾಗಿವೆ. ಮಂಗಳೂರು ನಗರ, ಬರ್ಕೆ, ಉರ್ವ, ಕಾವೂರು, ಮುಲ್ಕಿ, ಮೂಡುಬಿದಿರೆ, ಕೊಣಾಜೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 33ಕ್ಕೂ ಹೆಚ್ಚು ಪ್ರಕರಣಗಳು ಈತನ ಮೇಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.