ಚಿಕ್ಕಮಗಳೂರು :
ತಂದೆಯ ಜೊತೆ ಬೈಕ್ ನಲ್ಲಿ ಹೋಗುವ ವೇಳೆ ಗುಂಡಿ ತುಂಬಿದ್ದ ರಸ್ತೆಯಲ್ಲಿ ಬಿದ್ದು ಗಂಭೀರ ಗಾಯಗೊಂಡ ಯುವತಿ ಮೃತಪಟ್ಟ ಘಟನೆ ನಗರದ ದಂಡರಮಕ್ಕಿ ಸಮೀಪ ನಡೆದಿದೆ.
ಸಿಂದೂಜಾ (23) ಮೃತ ಯುವತಿ. ಯುವತಿಯು ವಿದೇಶಕ್ಕೆ ತೆರಳಲು ಪಾಸ್ಪೋರ್ಟ್ ವೇರಿಫಿಕೇಶನ್ಗಾಗಿ ತನ್ನ ತಂದೆ ಜೊತೆ ಬೈಕ್ನಲ್ಲಿ ಹೋಗುತ್ತಿದ್ದಳು. ದಂಡರಮಕ್ಕಿ ಸಮೀಪ ರಸ್ತೆಯಲ್ಲಿನ ಭಾರಿ ಗುಂಡಿಯನ್ನು ಗಮನಿಸದ ಸಿಂದೂಜಾ ತಂದೆ ಬೈಕನ್ನು ಗುಂಡಿಯಲ್ಲಿ ಇಳಿಸಿದ್ದರು. ಇದರಿಂದ ಆಯತಪ್ಪಿ ಕೆಳಗೆ ಬಿದ್ದಿದ್ದ ಸಿಂದೂಜಾ ಗಂಭೀರವಾಗಿ ಗಾಯಗೊಂಡಿದ್ದರು.
ತಂದೆ ಹೆಲ್ಮೆಟ್ ಹಾಕಿದ್ದ ಹಿನ್ನೆಲೆ ಹೆಚ್ಚು ಪೆಟ್ಟಾಗಿರಲಿಲ್ಲ ಸಿಂದೂಜಾ ತಲೆಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗಾಗಿ ಹಾಸನಕ್ಕೆ ಕೆರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಾರೆ.
ತಿಪಟೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಸಿಂದೂಜಾ ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಕೆಲಸಕ್ಕೆ ತೆರಳಲು ಪಾಸ್ ಪೋರ್ಟ್ ವೆರಿಫಿಕೇಶನ್ ಗಾಗಿ ನಗರ ಪೊಲೀಸ್ ಠಾಣೆಗೆ ತೆರಳುವಾಗ ಅಪಘಾತವಾಗಿದೆ.
ರಸ್ತೆ ಸರಿ ಇಲ್ಲದೇ ಇರುವುದರಿಂದ ಘಟನೆ ನಡೆದಿದೆ ಎಂದು ಸಿಂದೂಜಾ ತಂದೆ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಯುವತಿ ಸಾವಿನ ಬಳಿಕ ಎಚ್ಚೆತ್ತಿರುವ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಕಾಂಗ್ರೆಸ್, ಎಬಿವಿಪಿ ಸೇರಿದಂತೆ ಹಲವು ಸಂಘಟನೆಗಳು ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
