ಮೈಸೂರು:
ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ಅಂಬಾವಿಲಾಸ ಅರಮನೆಯಲ್ಲಿ ಜೋಡಿಸಿರುವ ರತ್ನಖಚಿತ ಸಿಂಹಾಸನ ನೋಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ.
ಪ್ರತಿವರ್ಷ ದಸರಾ ಆರಂಭಕ್ಕೆ ಕೆಲವೇ ದಿನಗಳಿರುವಾಗ ಸಿಂಹಾಸನದ ಜೋಡಣೆ ನಡೆಯುತ್ತದೆ. ಈ ಬಾರಿ ಅಧಿಕ ಮಾಸದ ಕಾರಣ ಒಂದು ತಿಂಗಳು ಮುಂಚಿತವಾಗಿಯೇ ಜೋಡಣೆ ನಡೆದಿದ್ದು, ಅರಮನೆ ಪ್ರವೇಶ ಶುಲ್ಕ 70 ರೂ. ನೊಂದಿದೆ ಹೆಚ್ಚುವರಿ 50ರೂ. ಶುಲ್ಕ ಪಡೆದು ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ದರ್ಬಾರ್ ಹಾಲ್ ಸಮೀಪ ಅರಮನೆ ಸಿಬ್ಬಂದಿಯನ್ನು ಶುಲ್ಕ ಪಡೆಯಲು ನಿಯೋಜಿಸಲಾಗಿದೆ.
ಜಿಲ್ಲಾ ಖಜಾನೆಯಲ್ಲಿದ್ದ ಈ ಸಿಂಹಾಸನವನ್ನು ದರ್ಬಾರ್ ಹಾಲ್ ನಲ್ಲಿ ಜೋಡಿಸಿಡಲಾಗಿದೆ. ಸಿಂಹಾಸನದ ಛಾಯಾಚಿತ್ರ, ವಿಡಿಯೋ ತೆಗೆಯುವುದನ್ನು ನಿಷೇಧಿಸಲಾಗಿದೆ.
ಈ ಹಿಂದೆಲ್ಲಾ ದಸರಾ ಸಂದರ್ಭದಲ್ಲಿ ಅರಮನೆಗೆ ಬರುವ ಪ್ರವಾಸಿಗರಿಗೆ ಸಿಂಹಾಸನ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಕಳೆದ 8 ವರ್ಷ ದಿಂದ ಸುರಕ್ಷತೆ ದೃಷ್ಟಿಯಿಂದ ಸಿಂಹಾಸನ ಸುರಕ್ಷತೆ ಕಾಯ್ದುಕೊಳ್ಳಲಾಗುತ್ತಿತ್ತು. ಆದರೆ ಸಾರ್ವಜನಿಕ ವಲಯದಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕಳೆದ 2 ವರ್ಷದಿಂದ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಮತ್ತೆ ಸಿಂಹಾಸನ ವೀಕ್ಷಣೆಗೆ ಪ್ರತ್ಯೇಕ 50 ರೂ.ಶುಲ್ಕ ಪಡೆದು, ಅವಕಾಶ ನೀಡು ವಂತೆ ಸೂಚಿಸಿದ್ದರು. ಹಾಗಾಗಿ ಈ ಬಾರಿಯೂ ಪ್ರವಾಸಿಗರಿಗೆ ಸಿಂಹಾಸನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
