ಬಾಗಲಕೋಟೆ:
ರಾಜ್ಯದ ಸರ್ಕಾರಿ ಶಾಲೆಯ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ದೆಹಲಿಯಲ್ಲಿ ನಡೆಯುವ ಸಂವಾದವೊಂದರಲ್ಲಿ ಭಾಗವಹಿಸುವ ಅದೃಷ್ಟ ಒದಗಿ ಬಂದಿದೆ.
ಜಿಲ್ಲೆಯ ಹುನಗುಂದ ತಾಲೂಕಿನ ತಾರಿವಾಳ ಗ್ರಾಮದ ಪೂರ್ಣಿಮಾ ರೇವಣಸಿದ್ದಪ್ಪ ನಾಶಿ, ಪ್ರಧಾನ ಮಂತ್ರಿಗಳು ಜ. 20ರಂದು ನಡೆಸುವ ಸಂವಾದದಲ್ಲಿ ಭಾಗವಹಿಸಲು ಆಯ್ಯೆಯಾಗಿರುವ ಬಾಲಕಿ. ಈಕೆ ಜಂಬಲದಿನ್ನಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ.
ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ‘ಎಕ್ಸಾಮಿಂಗ್ ಎಕ್ಸಾಮ್’ ಎಂಬ ವಿಷಯದ ಬಗ್ಗೆ ಪೂರ್ಣಿಮಾ ಪ್ರಬಂಧ ಬರೆದಿದ್ದರು. ದೇಶದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಈ ವಿಷಯವಾಗಿ ಪ್ರಬಂಧ ಬರೆದಿದ್ದರು. ಅಂತಿಮ ಸುತ್ತಿನಲ್ಲಿ ಆಯ್ಕೆ ಆದ ವಿದ್ಯಾರ್ಥಿಗಳಲ್ಲಿ ಪೂರ್ಣಿಮಾ ಹೆಸರೂ ಇದೆ. ಈ ಕಾರಣದಿಂದ ಅವರನ್ನು ಮೋದಿ ಜೊತೆ ಸಂವಾದಕ್ಕೆ ಆಯ್ಕೆ ಮಾಡಲಾಗಿದೆ.
ಜ.16 ರಂದು ಬೆಂಗಳೂರಿಗೆ ತೆರಳಿ ವರದಿ ಮಾಡಿಕೊಳ್ಳುವಂತೆ ಇ ಮೇಲ್ ಬಂದಿದ್ದು, ಇದೀಗ ಶಾಲೆಯ ಮುಖ್ಯೋಪಾಧ್ಯಾಯರು ಬಾಲಕಿ ಬಗ್ಗೆ ಮಾಹಿತಿ ಒಳಗೊಂಡ ಅರ್ಜಿಯನ್ನು ಭರ್ತಿ ಮಾಡಿ ಕಳುಹಿಸುವಂತೆ ರಾಜ್ಯ ಸಮಗ್ರ ಶಿಕ್ಷಣದ ಕಾರ್ಯಕ್ರಮಾಧಿಕಾರಿ ರವಿಕುಮಾರ ವಿ.ಆರ್. ಇ ಮೇಲ್ ಮಾಡಿದ್ದಾರೆ.
ಜನವರಿ 20 ರಂದು ಮೋದಿ ಅವರು ದೆಹಲಿಯಲ್ಲಿ ದೇಶದ ಮೂಲೆ-ಮೂಲೆಗಳಿಂದ ಆಯ್ಕೆ ಆಗಿ ಬಂದ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಮತ್ತು ಅದರ ತಯಾರಿ ವಿಷಯವಾಗಿ ಚರ್ಚೆ ನಡೆಸಲಿದ್ದಾರೆ. ಆ ದಿನ ಸಂವಾದದಲ್ಲಿ ಪೂರ್ಣಿಮಾ ಸಹ ಇರುತ್ತಾರೆ, ಮೋದಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ, ಪ್ರಶ್ನೆಗಳನ್ನು ಕೇಳಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ