ಬೆಂಗಳೂರು:
ಜುಲೈ 31ರೊಳಗೆ ಸರ್ಕಾರ ರಚನೆ ಮಾಡಬೇಕು. ಇಲ್ಲದಿದ್ರೆ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿರುವುದಿಲ್ಲ. ಹಣಕಾಸು ವಿಚಾರದಲ್ಲಿ ಸಮಸ್ಯೆ ಎದುರಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಇದೇ ತಿಂಗಳ ಅಂತ್ಯದೊಳಗೆ ಸರ್ಕಾರ ರಚನೆಯಾಗದಿದ್ದರೆ, ಫೈನಾನ್ಸ್ ಬಿಲ್ ಪಾಸ್ ಆಗದೇ ಹೋದರೆ ಸರ್ಕಾರದ ಖಜಾನೆಯಿಂದ ಒಂದೇ ಒಂದು ರೂಪಾಯಿ ಕೂಡ ಎತ್ತಲು ಸಾಧ್ಯವಾಗೋದಿಲ್ಲ. ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆಯ ಮಾತಿರಲಿ, ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಸರ್ಕಾರದ ಬಳಿ ದುಡ್ಡು ಇಲ್ಲದಂತಾಗುತ್ತದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೈತ್ರಿಸರ್ಕಾರ ರಚನೆಯಾದಂದಿನಿಂದ ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲದಂಥ ಸ್ಥಿತಿ ನಿರಂತರವಾಗಿ ಇದೆ. ಸರ್ಕಾರ ಪತನವಾದರೂ ಈ ಸ್ಥಿತಿ ತಪ್ಪಿಲ್ಲ. ಈ ಅಧಿವೇಶನದಲ್ಲೇ ಹಣಕಾಸು ವಿಧೇಯಕ ಮಂಡನೆಯಾಗಬೇಕಿತ್ತು. ಆದರೆ, ವಿಪಕ್ಷ ಬಿಜೆಪಿ ಇದಕ್ಕೆ ಅವಕಾಶ ನೀಡಲಿಲ್ಲ. ವಿಶ್ವಾಸಮತದ ವಿಚಾರದಲ್ಲೇ ಇಡೀ ಅಧಿವೇಶನ ಕಳೆದುಹೋಗಿತ್ತು. ಒಂದು ವೇಳೆ, ಬಿಜೆಪಿಯು ಜುಲೈ 31ರೊಳಗೆ ಸರ್ಕಾರ ರಚನೆ ಮಾಡದೇ ಹೋದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯವಾಗಲಿದೆ. ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ