ಬೆಂಗಳೂರು :
ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಪಾದರಾಯನಪುರ ಪುಂಡರಿಗೆ ರಾಜ ಮರ್ಯಾದೆಯೊಂದಿಗೆ ಸ್ವಾಗತ ಕೋರಲಾಗಿದೆ.
ಕೋವಿಡ್ ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಆರೋಗ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದಲ್ಲದೇ, ಜೆಜೆನಗರ ಠಾಣೆ ಪೊಲೀಸರ ಶೆಡ್ ಗಳನ್ನು ಧ್ವಂಸಗೊಳಿಸಿ ಅರ್ಭಟ ಮೆರೆದಿದ್ದ 126 ಆರೋಪಿಗಳಿಗೂ ಹೈಕೋರ್ಟ್ ಮೇ 29ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆರೋಪಿಗಳು 1 ಲಕ್ಷ ರೂ. ಬಾಂಡ್, ಶ್ಯೂರಿಟಿ ಒದಗಿಸಬೇಕು ಎಂದು ನ್ಯಾಯಾಧೀಶರಾದ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದ ನ್ಯಾಯಪೀಠವು ಆದೇಶ ಹೊರಡಿಸಿತ್ತು. ಕೋರ್ಟ್ ಆದೇಶದ ಬೆನ್ನಲ್ಲೇ ಪೊಲೀಸರು ಹಳೇಗುಡ್ಡದಹಳ್ಳಿಯ ಹಜ್ ಭವನದಲ್ಲಿ ಆರೋಪಿಗಳನ್ನು ಇರಿಸಿ ಕೊರೊನಾ ಟೆಸ್ಟ್ ಮಾಡಿಸಿ, ಎಲ್ಲಾ ಪ್ರಕ್ರಿಯೆ ಬಳಿಕ ಇಂದು ಬಿಡುಗಡೆ ಮಾಡಿದರು.
ಜಾಮೀನು ಪಡೆದು ಹೊರಬಂದವರನ್ನು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ತಮ್ಮದೇ ಬಸ್ ಗಳಲ್ಲಿ ಪಾದರಾಯನಪುರಕ್ಕೆ ಕರೆ ತಂದಿದ್ದಾರೆ.
ಆರೋಪಿಗಳು ಬರುತ್ತಿದ್ದಂತೆ ಜಮೀರ್ ಅಹ್ಮದ್ ಕೈಮುಗಿದು ಅವರನ್ನು ಬರಮಾಡಿಕೊಂಡರು. ಈ ಮೂಲಕ ತಾನು ಅವರ ಬೆಂಬಲಕ್ಕೆ ನಿಂತಿರುವುದಾಗಿ ಸ್ಪಷ್ಟಪಡಿಸಿದರು. ಆರೋಪಿಗಳಲ್ಲರೂ ಮಾಸ್ಕ್ ಧರಿಸಿ ಬಸ್‌ನಿಂದ ಇಳಿದು ತಮ್ಮ ಮನೆಗಳಿಗೆ ತೆರಳಿದರು.
ಜಮೀರ್ ಅಹಮದ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್‌ನ 3 ಬಸ್‌ಗಳಲ್ಲಿ ಆರೋಪಿಗಳು ಬರುತ್ತಿದ್ದಂತೆ ತಮ್ಮವರನ್ನು ಸ್ವಾಗತಿಸಲು ಹಳೆ ಗುಡ್ಡದಹಳ್ಳಿಯಲ್ಲಿ ಸ್ಥಳೀಯರು ಕಿಕ್ಕಿರಿದು ಸೇರಿದ್ದರು. ಜನರನ್ನು ಪೊಲೀಸರು ಚದುರಿಸಿದರು. ಜೆ.ಜೆ.ನಗರ ವಾರ್ಡ್ ಕಾರ್ಪೋರೇಟರ್ ಪತಿ ಅಲ್ತಾಫ್ ಖಾನ್ ಕೂಡಾ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ