ಬೆಂಗಳೂರು :
ರಾಜ್ಯದ 39 ಮಠಗಳಿಗೆ ತಲಾ 1 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ರಾಜ್ಯದಲ್ಲಿರುವ 39 ಮಠಗಳಿಗೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಟ್ಟು 60 ಕೋಟಿ ಅನುದಾನ ನೀಡಲು ನಿರ್ಧಾರ ಮಾಡಿದ್ದರು. ಇದನ್ನು ಮರು ಹಂಚಿಕೆ ಮಾಡಿರುವ ಬಿಎಸ್‌ವೈ ಸರ್ಕಾರ 39 ಮಠಗಳಿಗೆ ತಲಾ ಒಂದು ಕೋಟಿ ನೀಡಲು ನಿರ್ಧಾರ ಮಾಡಿದೆ.
ಪ್ರಸಕ್ತ ಸಾಲಿನ (2020–21) ಬಜೆಟ್‌ನಲ್ಲಿ ಮಠಗಳಿಗೆ ಅನುದಾನ ನೀಡಲು ₹ 30 ಕೋಟಿ ಮೀಸಲಿಡಲಾಗಿದೆ. ಆದರೆ, ಯಾವ ಯಾವ ಮಠಗಳಿಗೆ ಎಷ್ಟೆಷ್ಟು ಅನುದಾನ ನೀಡಬೇಕೆಂಬ ಬಗ್ಗೆ ಹೇಳಿರಲಿಲ್ಲ. ಆದರೆ, ಈ ಮೊತ್ತದಲ್ಲಿ ₹ 1 ಕೋಟಿಯನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುಗಣಿ ಗ್ರಾಮದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಈಗಾಗಲೇ ನೀಡಲಾಗಿದೆ.
ಸಾಮಾನ್ಯ ಯೋಜನೆಯಡಿ ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ನಿರ್ಮಾಣಗಳಿಗೆ ಪ್ರಸಕ್ತ ಸಾಲಿನಲ್ಲಿ ₹ 26 ಕೋಟಿ ನೀಡಲಾಗಿದೆ. ಈ ಅನುದಾನದಿಂದ ₹ 10 ಕೋಟಿಯನ್ನು ಬಳಸಿ, ಒಟ್ಟು ₹ 39 ಕೋಟಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.
39 ಮಠಗಳಿಗೆ ತಲಾ ₹ 1 ಕೋಟಿಯಂತೆ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಕಳುಹಿಸಿದ್ದೇನೆ. ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಬಹುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈಗಾಗಲೇ ಸರ್ಕಾರ ಕೋವಿಡ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಮಠ-ಮಾನ್ಯಗಳು ಸೇರಿದಂತೆ ಎಲ್ಲದರ ಮೇಲೂ ಈ ಕೊರೊನಾ ಎಫೆಕ್ಟ್ ಬಿದ್ದಿದೆ. ಹೀಗಾಗಿ ಒಂದು ಮಠಕ್ಕೆ ಹೆಚ್ಚು ಒಂದು ಮಠಕ್ಕೆ ಕಡಿಮೆ ನೀಡುವ ಬದಲು ಎಲ್ಲಾ 39 ಮಠಗಳಿಗೂ ಸಮಾನವಾಗಿ ಅನುದಾನ ನೀಡಲು ಸರ್ಕಾರ ಮುಂದಾಗಿದೆ.
ಇನ್ನು ಈ ಅನುದಾನ ನೀಡುವ ಬಗ್ಗೆ ಆರ್ಥಿಕ ಇಲಾಖೆ ಅನುಮತಿ ಪಡೆಯಬೇಕಾಗಿದೆ. ಇದಕ್ಕಾಗಿ ಇಲಾಖೆಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಆರ್ಥಿಕ ಇಲಾಖೆ ಅನುಮತಿ ನೀಡಿದ ನಂತರ ಮಠಗಳಿಗೆ ಅನುದಾನ ಹೋಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
