ಹಾವೇರಿ:
ಆ.10 (ಕರ್ನಾಟಕ ವಾರ್ತೆ): ಜಿಲ್ಲೆಯ ಅತಿವೃಷ್ಠಿ ಹಾಗೂ ನೆರೆ ಹಾವಳಿ ಪರಿಹಾರಕ್ಕೆ ಯಾವುದೇ ಅನುದಾನ ಕೊರತೆ ಇಲ್ಲ. ಜಿಲ್ಲಾ ವಿಪತ್ತು ನಿಧಿಯಲ್ಲಿ 16 ಕೋಟಿ ರೂ. ಹಣವಿದೆ. ತಾಲೂಕಾ ಆಡಳಿತ ಬಳಿ 15 ರಿಂದ 20 ಲಕ್ಷ ರೂ. ಹಣವಿದೆ. ಸಂತ್ರಸ್ಥರ ನೆರವಿಗೆ ಜಿಲ್ಲಾಡಳಿತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದೆ. ನೆರೆ ಹಾಗೂ ಅತಿವೃಷ್ಠಿ ಬಾಧಿತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.
ಅತಿವೃಷ್ಠಿ ಹಾಗೂ ನೆರೆ ಪರಿಹಾರ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಸಂತ್ರಸ್ತರಿಗಾಗಿ ಜಿಲ್ಲೆಯಲ್ಲಿ 76 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ ತಾತ್ಕಾಲಿಕ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ. ಮಳೆ ಹಾಗೂ ನೆರೆಯ ಸಂಕಷ್ಟದಲ್ಲಿರುವವರು ಪರಿಹಾರ ಕೇಂದ್ರಕ್ಕೆ ಆಗಮಿಸಿ ಆಶ್ರಯಪಡೆಯುವಂತೆ ತಿಳಿಸಿದರು.
ಆಗಸ್ಟ್ 8 ಮತ್ತು 9 ರಂದು 591.7 ಎಂ ಎಂ ಹಾಗೂ 9 ರಿಂದ 10 ರಂದು 224.3 ಎಂ.ಎಂ. ಮಳೆಯಾಗಿದೆ. ತುಂಗಭದ್ರಾ ನದಿಯಿಂದ 1.15 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ವರದಾ ನದಿಯಿಂದ 32 ಕ್ಯೂಸೆಕ್ ಮತ್ತು ಧರ್ಮಾ ನದಿಯಿಂದ ಐದುಸಾವಿರ ಕ್ಯೂಸೆಕ್ ನೀರು ಹರಿದುಬಂದಿರುವುದರಿಂದ ನದಿಪಾತ್ರದ ಗ್ರಾಮಗಳಿಗೆ ನೆರೆ ತುಂಬಲು ಕಾರಣವಾಗಿ ಹಾನಿ ಹೆಚ್ಚಾಗಿದೆ. ಹಾನಗಲ್ ತಾಲೂಕಿನ ನಾಲ್ಕು ಗ್ರಾಮಗಳು, ಸವಣೂರ ತಾಲೂಕಿನ ನಾಲ್ಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದವು. ಉಳಿದಂತೆ ಗ್ರಾಮಗಳಲ್ಲಿ ಬಾಗಶಃ ನೀರು ತುಂಬಿಹಾನಿ ಸಂಭವಿಸಿದೆ. ಸಂತ್ರಸ್ಥ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪರಿಹಾರ ಕೇಂದ್ರ:
76 ಗ್ರಾಮಗಳು ಬಾಧಿತವಾಗಿದ್ದು, 6493 ಜನರನ್ನು ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಹಾವೇರಿಯಲ್ಲಿ 53, ರಾಣೇಬೆನ್ನೂರಿನಲ್ಲಿ ಎರಡು, ಬ್ಯಾಡಗಿಯಲ್ಲಿ ಎರಡು, ಸವಣೂರಿನಲ್ಲಿ ನಾಲ್ಕು, ಶಿಗ್ಗಾವಿಯಲ್ಲಿ ನಾಲ್ಕು ಹಾಗೂ ಹಾನಗಲ್‍ನಲ್ಲಿ 11 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರಿಹಾರ ಕೇಂದ್ರದಲ್ಲಿ ಆಶ್ರಯಪಡೆದಿರುವ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಹೊದಿಕೆಗಳನ್ನು ನೀಡಲಾಗಿದೆ, ಅಗತ್ಯ ವೈದ್ಯೋಪಚಾರದ ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ಥರ ಬೇಡಿಕೆಗೆ ಅನುಸಾರ ಯಾವುದೇ ಕೊರತೆಯಾಗದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಪ್ರವಾಹದಲ್ಲಿ ಓರ್ವ ವ್ಯಕ್ತಿ ಕೊಚ್ಚಿಹೋಗಿದ್ದು ಈವರೆಗೆ ಪತ್ತೆಯಾಗಿಲ್ಲ ಹಾಗೂ ಐದು ಜನ ಗಾಯಾಳುಗಳಾಗಿದ್ದಾರೆ ಎಂದು ತಿಳಿಸಿದರು.
ಹಿರೇಕೆರೂರಿನಲ್ಲಿ ಒಂದು ಜಾನುವಾರು ಕ್ಯಾಂಪ್‍ನ್ನು ಸ್ಥಾಪಿಸಿ ಪರಿಹಾರ ಕೇಂದ್ರದಲ್ಲಿ ಇರಿಸಲಾಗಿದೆ. ಏಳು ತಾಲೂಕಿನಲ್ಲಿ ಜಾನುವಾರುಗಳಿಗಾಗಿ ಮೇವಿನ ಬ್ಯಾಂಕುಗಳನ್ನು ಸ್ಥಾಪಿಸಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. 23 ಕುರಿಗಳು, 10 ಮೇಕೆ, ಎರಡು ಎಮ್ಮೆ, ಎರಡು ಹಸು ಸಾವನ್ನಪ್ಪಿವೆ ಎಂದು ತಿಳಿಸಿದರು.
ಮನೆ ಹಾನಿ: ಜಿಲ್ಲೆಯಲ್ಲಿ 2822 ಮನೆಗಳಿಗೆ ಹಾನಿಯಾಗಿದ್ದು 271.25 ಲಕ್ಷ ರೂ. ನಷ್ಟ ಸಂಭವಿಸಿದೆ. ಈ ಪೈಕಿ 2817 ಮನೆಗಳು ಭಾಗಶಃ ಹಾಳಾಗಿವೆ. ಅಂದಾಜು 266.41 ಲಕ್ಷ ರೂ. ಹಾನಿಯಾಗಿದೆ. ಐದು ಮನೆಗಳು ಪೂರ್ಣಪ್ರಮಾಣದಲ್ಲಿ ಹಾಳಾಗಿದ್ದು, ರೂ.4.88 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು.
ರಸ್ತೆಹಾನಿ : ಗುಡೂರು, ಗುಯಿಲಗುಂದಿ, ಮಣ್ಣೂರು, ಚಿಕ್ಕನೆಲ್ಲರೂ, ಹರವಿ, ಚಪ್ಪರದಿನ್ನಿ, ಅಲ್ಲಾಪುರ, ಹರನಗಿರಿ ಗ್ರಾಮಗಳ ಎಂಟು ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದ ರಸ್ತೆಗಳಿಗೆ ಹಾನಿಯಾಗಿದೆ. ಏಳು ರಾಜ್ಯ ಹೆದ್ದಾರಿಗಳು, 32 ಎಂ.ಡಿ.ಆರ್., ಆರು ಸಿಡಿಗಳು , ಒಂದು ಹೆಡ್‍ವಾಲ್ಸ್ ಹಾನಿಯಾಗಿದ್ದು ರೂ. 273.1 ಲಕ್ಷ ಮೌಲ್ಯದ ಲೋಕೋಪಯೋಗಿ ರಸ್ತೆ ಸೇತುವೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.
ವಿದ್ಯುತ್ ಹಾನಿ:
701 ವಿದ್ಯುತ್ ಕಂಬಗಳು ಮುಳುಗಿಹೋಗಿವೆ. 177 ಕಂಬಳಿಗೆ ಹಾನಿಯಾಗಿದೆ. 137 ಡಿಟಿಸಿ ಹಾಗೂ ಡಿಟಿಆರ್. ಮುಳುಗಿ ಹೋಗಿವೆ. ಏಳು ಡಿಟಿಸಿಗೆ ಹಾನಿಯಾಗಿವೆ ನಷ್ಟದ ಅಂದಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಳೆಹಾನಿ:
ಕೃಷಿ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಬೆಳೆಹಾನಿ ಸಮೀಕ್ಷೆಯನ್ನು ಡ್ರೋನ್ ಕ್ಯಾಮರಾ ಬಳಸಿ ಸಮೀಕ್ಷೆ ನಡೆಸಲಾಗುತ್ತದೆ. ಪ್ರಾಥಮಿಕ ವರದಿಯಂತೆ ಐದು ಕೋಟಿ ರೂ. ಬೆಳೆನಷ್ಟ ಸಂಭವಿಸಿದೆ. 7261.95 ಹೆಕ್ಟೇರ್ ಬೆಳೆಹಾನಿಯಾಗಿದೆ. ಹಾನಗಲ್, ಹಾವೇರಿ, ಶಿಗ್ಗಾಂವ ಹಾಗೂ ಸವಣೂರ ತಾಲೂಕಿನಲ್ಲಿ ಹೆಚ್ಚಿನ ಬೆಳೆಹಾನಿ ಸಂಭವಿಸಿರುವುದಾಗಿ ತಿಳಿಸಿದರು.
ಕುಡಿಯುವ ನೀರು:
ಹದಿನೈದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಹಾಗೂ ಹತ್ತು ಜಾಕ್‍ವೆಲ್‍ಗಳು ನೀರಿನಲ್ಲಿ ಮುಳುಗಿ ಹೋಗಿವೆ. ನದಿನೀರಲಗಿ ಗ್ರಾಮಕ್ಕೆ ಬೋಟ್ ಮುಖಾಂತರ ನೀರಿನ ಕ್ಯಾನ್‍ಗಳನ್ನು ಕುಡಿಯಲು ಜನರಿಗೆ ಪೂರೈಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಾಚರಣೆ ಬೋಟ್ ವ್ಯವಸ್ಥೆ:
ಬಳ್ಳಾರಿ ಹಾಗೂ ಚಿತ್ರದುರ್ಗದಿಂದ ಅಗ್ನಿಶಾಮಕ ದಳದ 30ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ನಾಲ್ಕು ಯಾಂತ್ರಿಕೃತ ಬೋಟ್‍ಗಳು ಜಿಲ್ಲೆಗೆ ಆಗಮಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ್, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ