ಬೆಂಗಳೂರು:
ನಗರದಲ್ಲಿ ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಕೆ.ಆರ್. ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಸೇರಿ ಒಟ್ಟು 15 ಪ್ರಮುಖ ರಸ್ತೆಗಳನ್ನು ಸೀಲ್‌ಡೌನ್ ಮಾಡಿ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಬುಧವಾರ ಆದೇಶಿಸಿದ್ದಾರೆ.
ಟೌನ್ ಹಾಲ್ ಸರ್ಕಲ್, ಜೆ. ಸಿ. ನಗರ, ಎಎಂ ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ, ಕೆ ಆರ್ ಮಾರ್ಕೆಟ್ ಜಂಕ್ಷನ್, ಸರ್ವೀಸ್ ರಸ್ತೆ, ತರಗುಪೇಟೆ ರಸ್ತೆ, 2 ಮತ್ತು 4ನೇ ಮುಖ್ಯರಸ್ತೆ, ಟಿಪ್ಪು ಸುಲ್ತಾನ್ ಪ್ಯಾಲೇಸ್ ರಸ್ತೆ, ಭಾಷ್ಯಂ ರಸ್ತೆ, ಶ್ರೀನಿವಾಸ್ ಮಂದಿರ ರಸ್ತೆ, ಕಿಲ್ಲಾರಿ ರಸ್ತೆ, ಅಂಜನೇಯ ದೇವಾಲಯ ಸ್ಟ್ರೀಟ್, ಸಂಕಲ್ ಪೇಟೆ ರಸ್ತೆ ಮತ್ತು ಎಸ್ ಜೆಪಿ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಈ ಪ್ರದೇಶಗಳಲ್ಲಿ ಜನರ ಆರೋಗ್ಯ ಪರೀಕ್ಷೆ, ಸೋಂಕಿತರ ಸಂಪರ್ಕದಲ್ಲಿರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯಾಚರಣೆ ಹೆಚ್ಚು ಮುಂಜಾಗ್ರತೆ ವಹಿಸುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
ಅಲ್ಲದೆ, ಈ ಸೀಲ್‌ಡೌನ್ ರಸ್ತೆಗಳಲ್ಲಿ ಕಸ ವಿಲೇವಾರಿ, ನೀರು ಹಾಗೂ ಸ್ವತ್ಛತೆ ಸೇರಿದಂತೆ ಪಾಲಿಕೆ ಕಾರ್ಯಗಳಲ್ಲಿ ಯಾವುದೇ ಲೋಪವಾಗದಂತೆ ಸಮನ್ವಯ ತಂಡ ರಚನೆ ಮಾಡಿಕೊಳ್ಳಲು ಆಯುಕ್ತರು ನಿರ್ದೇಶನ ನೀಡಿದ್ದಾರೆ. ಈ ರಸ್ತೆಗಳಲ್ಲಿ ವಾಣಿಜ್ಯ ಚಟುವಟಿಕೆ, ಜನ ಸಂಚಾರ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಕರಣಗಳು ಹೆಚ್ಚು ಕಂಡು ಬಂದಿದೆ. ಅಲ್ಲದೆ, ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ಆತಂಕ ಎದುರಾಗಿದ್ದು, ಸೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
