ಬೆಂಗಳೂರು:
ಸುಮಾರು 500 ಕೆಜಿ ತೂಕದ ಗೇಟ್ ಬಿದ್ದು ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿರುವ ಟಾಟಾ ಇನ್‌ಸ್ಟಿಟ್ಯೂಟ್‌ನ ಕಬ್ಬಿಣದ ಗೇಟ್ ಕಳಚಿ ಬಿದ್ದಿದ್ದು, ಒಡಿಶಾದ ಗೌತಮ್ ಬಿಸ್ವಾಲ್ (24) ಮೃತ ಸೆಕ್ಯೂರಿಟಿ ಗಾರ್ಡ್.
ಇನ್ನು ಘಟನೆಯಲ್ಲಿ ಬಿಹಾರದ ಅನಿಲ್ ಕುಮಾರ್ ಮತ್ತು ಒಡಿಶಾದ ವೈ.ನಾಯಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
3 ವರ್ಷಗಳ ಹಿಂದೆ ನಗರಕ್ಕೆಬಂದಿದ್ದ ಬಿಸ್ವಾಲ್, ಖಾಸಗಿ ಸೆಕ್ಯೂರಿಟಿಏಜೆನ್ಸಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಏಜೆನ್ಸಿ ಅವರನ್ನು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸಕ್ಕೆ ನಿಯೋಜಿಸಿತ್ತು.
6 ಅಡಿ ಎತ್ತರ ಮತ್ತು 15 ಅಡಿ ಅಗಲದ 500 ಕೆ.ಜಿ. ತೂಕದ ಈ ಗೇಟ್‌ನ್ನು ನಾಲ್ಕು ತಿಂಗಳ ಹಿಂದೆ ಅಳವಡಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಆರು ಗಂಟೆಗೆ ಕೆಲಸಕ್ಕೆ ಹಾಜರಾಗಿದ್ದ ಬಿಸ್ವಾಲ್, ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಲ್ಲಿಗೆ ಕಾರಿನಲ್ಲಿ ಬಂದಿದ್ದ ಸಂದರ್ಶಕರೊಬ್ಬರಿಗೆಗೇಟ್ ತೆಗೆಯುತ್ತಿದ್ದಂತೆ, ಅದು ಕಳಚಿ ಬಿದ್ದಿದೆ. ಇದನ್ನು ತಕ್ಷಣವೇ ಗಮನಿಸಿದ ಆಟೋ ಚಾಲಕರೊಬ್ಬರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಬಿಸ್ವಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವಿವಾಹಿತರಾಗಿರುವ ಬಿಸ್ವಾಲ್ ಅವರ ಕುಟುಂಬ ಒಡಿಶಾದಲ್ಲಿದೆ. ಅವರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹ ಪಡೆಯಲು ನಗರಕ್ಕೆ ಬರುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
ಸದ್ಯ ಸಂಸ್ಥೆಯ ಎಂಜಿನಿಯರ್ ಹಾಗೂ ಗೇಟ್ ತಯಾರಿಸಿದ ವ್ಯಕ್ತಿಯ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗುವುದು ಎಂದು ಸದಾಶಿವನಗರ ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ