ದೆಹಲಿ:
ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಎಸ್ಐಟಿ ಅಧಿಕಾರಿಗಳು ಕಂಪನಿ ಮಾಲೀಕ ಮನ್ಸೂರ್ ಖಾನ್ ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮನ್ಸೂರ್ ನನ್ನು ಎಸ್ ಐಟಿ ಮತ್ತು ಇಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳು ವಿಚಾರಣೆ ನಡೆಸಲಿದ್ದು, ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿ ಎಂಟಿಎನ್ ಎಲ್ ಕಟ್ಟಡಕ್ಕೆ ಕರೆದೊಯ್ಯಲಾಗಿದೆ.
ತಿಂಗಳ ಹಿಂದೆ ವಿದೇಶಕ್ಕೆ ಪರಾರಿಯಾಗಿದ್ದ ಮನ್ಸೂನ್, ನಂತರ ವಿಡಿಯೋ ಮೂಲಕ ತನಗಿರುವ ಜೀವ ಬೆದರಿಕೆ, ತಾನು ಭಾರತಕ್ಕೆ ಬಂದರೆ ನನಗೆ ಜೀವ ಭಯವಿದೆ ಎಂದು ಹೇಳಿಕೆ ನೀಡಿದ್ದ. ಜುಲೈ 15ರಂದು ಮತ್ತೊಂದು ವಿಡಿಯೋ ಮಾಡಿದ್ದ ಖಾನ್, ‘ನನಗೆ ಅನಾರೋಗ್ಯ ಕಾಡುತ್ತಿದೆ. ಹೃದಯ ಸಂಬಂಧಿ ಅನಾರೋಗ್ಯವಿದೆ. ಹಾಗಾಗಿ ನಾನು ಭಾರತಕ್ಕೆ ಬರುತ್ತಿದ್ದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಂಬಿಕೆಯಿದೆ’ ಎಂದಿದ್ದ.
ಬೆಂಗಳೂರಿನ ಐಎಂಎ ಜ್ಯುವೆಲ್ಲರಿ ಮಾಲಕನಾಗಿದ್ದ ಮೊಹಮ್ಮದ್ ಮನ್ಸೂರ್ ಖಾನ್ ಸಾವಿರಾರು ಜನರಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ. ರಾತ್ರೋರಾತ್ರಿ ಭಾರತಕ್ಕೆ ಮರಳಿದ್ದಾನೆ.
ಇದುವರೆಗೂ ಮನ್ಸೂರ್ ಖಾನ್ ಮತ್ತು ಐಎಂಎ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ 40 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ