ಬೆಂಗಳೂರು
ವಿಪಕ್ಷ ನಾಯಕನ ಆಯ್ಕೆ ಕುರಿತು ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ನಾಳೆ ನಗರದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.ಅ.10ರಿಂದ ವಿಧಾನಸಭೆಯ ಅಧಿವೇಶನ ಆರಂಭಗೊಳ್ಳುತ್ತಿದ್ದು, ಆ ವೇಳೆಗೆ ವಿಪಕ್ಷ ನಾಯಕನ ಆಯ್ಕೆ ಆಗಬೇಕಿದೆ. ಇನ್ನು ಕೇವಲ ಐದು ದಿನಗಳ ಮಾತ್ರ ಬಾಕಿ ಉಳಿದಿದ್ದು, ಶೀಘ್ರ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿರುವ ಕಾಂಗ್ರೆಸ್, ಹಿರಿಯ ನಾಯಕರಾದ ಮಧುಸೂದನ್ ಮಿಸ್ತ್ರಿ ಅವರನ್ನು ವೀಕ್ಷಕರನ್ನಾಗಿ ನೇಮಿಸಿದೆ.
ಹಾಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ವಿಪಕ್ಷ ನಾಯಕನನ್ನಾಗಿ ಮುಂದುವರೆಸಲು ಮೂಲ ಕಾಂಗ್ರೆಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹೈಕಮಾಂಡ್ಗೆ ತಲೆ ನೋವಾಗಿದ್ದು, ಹಿರಿಯ ನಾಯಕರ ಅಭಿಪ್ರಾಯಕ್ಕೆ ಮುಂದಾಗಿದೆ.ನಾಳೆ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಮೂಲ ಕಾಂಗ್ರೆಸಿಗರು ಮತ್ತು ಸಿದ್ದರಾಮಯ್ಯ ಬಣದ ಕಾಂಗ್ರೆಸ್ ನಾಯಕರ ನಡುವೆ ಬಲಾಬಲ ಪ್ರದರ್ಶನವಾಗಲಿದೆ.
ಸಿದ್ದರಾಮಯ್ಯ ಅವರು ವಿಪಕ್ಷ ನಾಯಕನಾಗಿ ಮುಂದವರೆಯಬೇಕೆಂದು ಕೆಲವರು ಪಟ್ಟು ಹಿಡಿದರೆ. ಮೂಲ ಕಾಂಗ್ರೆಸಿಗರಿಗೆ ಅವಕಾಶ ನೀಡಬೇಕೆಂದು ಇನ್ನು ಕೆಲವು ನಾಯಕರು ಒತ್ತಡ ಹೇರುತ್ತಿದ್ದಾರೆ.ಎಚ್.ಕೆ.ಪಾಟೀಲ್, ರಮೇಶ್ಕುಮಾರ್, ಪರಮೇಶ್ವರ್ ಸೇರಿದಂತೆ ಹಲವು ನಾಯಕರು ವಿಪಕ್ಷ ನಾಯಕನ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಮಿಸ್ತ್ರಿ ಹಸ್ತಕ್ಷೇಪ :
2006ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಸುಮಾರು ಏಳು ವರ್ಷಗಳ ಕಾಲ ಅಜ್ಞಾತವಾಸದಲ್ಲಿತ್ತು. ಪಕ್ಷದ ಭವಿಷ್ಯವೇ ಮುಗಿದು ಹೋಯಿತು ಎಂಬ ಹಂತದಲ್ಲಿ ಎಐಸಿಸಿ ಪ್ರಧಾನ ಪ್ರಧಾನಕಾರ್ಯದರ್ಶಿಯಾಗಿದ್ದ ಮಧುಸೂದನ್ ಮಿಸ್ತ್ರಿ ಅವರನ್ನು ರಾಜ್ಯ ಕಾಂಗ್ರೆಸ್ನ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಯಾವುದೇ ಅಬ್ಬರ, ಆಡಂಬರವಿಲ್ಲದೆ ತಮ್ಮ ಪಾಡಿಗೆ ತಾವು ಪಕ್ಷ ಸಂಘಟನೆ ಮಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವ್ಯವಸ್ಥಿತ ಕಾರ್ಯತಂತ್ರದ ಮೂಲಕ 2013 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯಲು ಪ್ರಮುಖ ಪಾತ್ರ ವಹಿಸಿದ್ದರು.
ಅಧಿಕಾರಕ್ಕೆ ಬಂದ ಮೇಲೆ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ಸಿಂಗ್ ಅನಂತರ ಕೆ.ಸಿ.ವೇಣುಗೋಪಾಲ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿದ್ದರು. ಇವರಿಬ್ಬರ ಕಾಲದಲ್ಲಿ ಪಕ್ಷ ಬಲಗೊಂಡಿದ್ದಕ್ಕಿಂತಲೂ ಗುಂಪುಗಾರಿಕೆಗಳೇ ಹೆಚ್ಚಾದವು.
ವಿಪಕ್ಷನ ಆಯ್ಕೆಗೆ ವೀಕ್ಷಕರನ್ನಾಗಿ ಗುಲಾಬ್ನಬಿ ಆಜಾದ್ ಅವರನ್ನು ಹೈಕಮಾಂಡ್ ಕಳುಹಿಸಲಿದೆ ಎಂಬ ಮಾಹಿತಿ ಇತ್ತು. ಆದರೆ, ಸೋನಿಯಾಗಾಂಧಿ ಅವರು ಕೊನೆ ಕ್ಷಣದಲ್ಲಿ ನಿರ್ಧಾರ ಬದಲಾವಣೆ ಮಾಡಿ ಮಧುಸೂದನ್ ಮಿಸ್ತ್ರಿ ಅವರನ್ನು ಕಳುಹಿಸಿದ್ದಾರೆ.
ಮಿಸ್ತ್ರಿ ಅವರ ಉಸ್ತುವಾರಿ ಅವಧಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿದ್ದವು. ಕ್ರಿಮಿನಲ್ಗಳು , ದಂಧೆಕೋರರನ್ನು ಮಿಸ್ತ್ರಿ ಹದ್ದಬಸ್ತಿನಲ್ಲಿ ಇಟ್ಟಿದ್ದರು. ವಿಪಕ್ಷ ನಾಯಕನ ಆಯ್ಕೆಯನ್ನು ನೆಪವಾಗಿಟ್ಟುಕೊಂಡು ವೀಕ್ಷಕರಾಗಿ ಬರುತ್ತಿರುವ ಮಿಸ್ತ್ರಿ, ರಾಜ್ಯ ರಾಜಕಾರಣದಲ್ಲಿ ಇನ್ನು ಮುಂದೆ ಹಸ್ತಕ್ಷೇಪ ಮಾಡಲಿದ್ದಾರೆ ಎಂಬ ಮಾಹಿತಿಗಳು ಇವೆ.ಒಂದು ವೇಳೆ ಅದು ನಿಜವಾದರೆ ಮತ್ತೆ ಮೂಲ ಕಾಂಗ್ರೆಸಿಗರ ಕೈ ಮೇಲಾಗಲಿದ್ದು, ಅಧಿಕಾರಕ್ಕಾಗಿ ಪಕ್ಷದಲ್ಲಿರುವವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ