ಬೆಂಗಳೂರು:

ಲೋಕಸಭಾ ಚುನಾವಣೆಯ ಹೊತ್ತಲ್ಲೇ ಕರ್ನಾಟಕದಲ್ಲಿ ಅತೀ ದೊಡ್ಡ ಐಟಿ ದಾಳಿ ನಡೆದಿದ್ದು, ಖಾಸಗಿ ಹೋಟೆಲ್ನಲ್ಲಿ ಕೂಡಿಟ್ಟಿದ್ದ ಬರೋಬ್ಬರಿ 2 ಕೋಟಿ ರೂ. ಸೀಜ್ ಮಾಡಲಾಗಿದೆ.
ಬೆಂಗಳೂರಿನ ಗಾಂಧಿನಗರದ ರಾಜಮಹಲ್ ಹೋಟೆಲ್ನಲ್ಲಿ ಐಟಿ ರೇಡ್ ಆಗಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಬಿ. ಪಾಟೀಲ್ಗೆ ಆದಾಯ ತೆರಿಗೆ ಇಲಾಖೆಯವರು ಶಾಕ್ ಕೊಟ್ಟಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯನಿರ್ವಹಾಹಕ ಇಂಜಿನಿಯರ್ ನಾರಾಯಣಗೌಡ ಬಿ.ಪಾಟೀಲ್ ಅವರು ಹೋಟೆಲ್ನಲ್ಲಿ ಮೂರು ರೂಂ ಬುಕ್ ಮಾಡಿದ್ದರು.
ಕೊಠಡಿ ಸಂಖ್ಯೆ 104, 105 ಮತ್ತು 115ರಲ್ಲಿ ಹಣ ಸಂಗ್ರಹಣೆ ಮಾಡಿರುವ ಖಚಿತ ಮಾಹಿತಿ ಅನ್ವಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿಯ ವೇಳೆ 500 ರೂ. ಮತ್ತು 2 ಸಾವಿರ ರೂ. ನೋಟುಗಳ 2 ಕೋಟಿ ಹಣವನ್ನು ಸಂಗ್ರಹ ಮಾಡಿರುವುದು ಬೆಳಕಿಗೆ ಬಂದಿದೆ.
ನಾರಾಯಣಗೌಡ ಹಾವೇರಿಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಗ್ರಾಮೀಣಾಭಿವೃದ್ದಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆಲಸ ಮಾಡುತ್ತಿದ್ದರು. ನಾರಾಯಣಗೌಡ ಚಾಲಕನನ್ನು ವಶಕ್ಕೆ ಪಡೆದು ಐಟಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹಣ ಸಂಗ್ರಹಣೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಐಟಿ ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ನಾರಾಯಣಗೌಡ ಬಿ.ಪಾಟೀಲ್ ಪರಾರಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








