ಬೆಂಗಳೂರು
ರಾಜ್ಯ ಪೆಲೀಸ್ ಇಲಾಖೆಯ ಕಚೇರಿ ಹಾಗೂ ಠಾಣೆಗಳಲ್ಲಿ ಜಾಡಮಾಲಿಗಳಾಗಿ ಕೆಲಸ ಮಾಡುತ್ತಿರುವವರನ್ನು ಸೇವೆಯಲ್ಲಿ ಮುಂದುವರೆಸಿ ಕಾಯಂಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಹಿತ ರಕ್ಷಣೆ ವೇದಿಕೆ ಕಾರ್ಯಕರ್ತರು ನೂರಾರು ಜಾಡಮಾಲಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಫ್ರೀಡಂ ಪಾರ್ಕ್ ಮೈದಾನದಲ್ಲಿ ಸೇರಿದ ಜಾಡಮಾಲಿ ನೌಕರರು, ಇಪ್ಪತ್ತಕ್ಕೂ ಅಧಿಕ ವರ್ಷಗಳಿಂದ ಸೇವೆ ಸಲ್ಲಿಸುತ್ತೀರುವ ನಮ್ಮನ್ನು ವಜಾಗೊಳಿಸಿ, ನಮ್ಮ ಬದುಕು ಬೀದಿ ಪಾಲಾಗಿದೆ. ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಆಕ್ರೋಶವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಎಂ.ನಾರಾಯಣ ಸ್ವಾಮಿ,ರಾಜ್ಯ ಪೊಲೀಸ್ ಇಲಾಖೆ ಮತ್ತು ಠಾಣೆಗಳಲ್ಲಿ ಹಾಗೂ ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಾಡಮಾಲಿ ನೌಕರರನ್ನು ವಜಾಗೊಳಿಸಿ ಹಿಂದಿನ ಸರ್ಕಾರ ಆದೇಶ ಮಾಡಿತ್ತು.ಇಂದರಿಂದ ಜಾಡಮಾಲಿ ಬದುಕು ಅತಂತ್ರವಾಗಿದ್ದು, ಅವರು ಇಲ್ಲಿಯವರೆಗೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸಂಪೂರ್ಣ ಸೇವಾ ಭದ್ರತೆಯನ್ನು ಕಳೆದುಕೊಂಡಿದ್ದಾರೆ ಎಂದು ದೂರಿದರು.
ಜಾಡಮಾಲಿ ನೌಕರರನ್ನು ಕಾಯಂ ಡಿ ದರ್ಜೆ ನೌಕರರೆಂದು ಪರಿಗಣಿಸಲು ಇರುವ ಕಾನೂನು ನ್ಯೂನತೆಗಳನ್ನು ಸರಿಪಡಿಸಿ ವಿಶೇಷ ನಿಯಮಗಳಲ್ಲಿ ವಿಶೇಷ ನೇಮಕಾತಿ ಮಾಡಿಕೊಂಡು ಡಿ ದರ್ಜೆ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಜಾಡಮಾಲಿಗಳನ್ನುವಿಶೇಷ ನೇಮಕಾತಿ ಮಾಡಿಕೊಂಡು ಡಿ ದರ್ಜೆ ನೌಕರರೆಂದು ಪರಿಗಣಿಸಿ ಸೇವಾ ಭದ್ರೆಗೆ, ಭವಿಷ್ಯ ನಿಧಿ ನೀಡಿ ಗುತ್ತಿಗೆದಾರರು ನೇಮಿಸುವ ಸ್ವಚ್ಛತಾ ನೌಕರರುಗಳ ಮೇಲ್ವಿಚಾರಣೆಗೆ ತಮ್ಮ ಘಟಕದಿಂದ ಓರ್ವ ಮೇಲ್ವಿಚಾರಕ ಅಧಿಕಾರಿಯನ್ನು ನೇಮಿಸಬೇಕು ಸ್ವಚ್ಛತೆಯ ಬಗ್ಗೆ ಅಧಿಕಾರಿ ದೃಢೀಕರಿಸಿದ ನಂತರ ಸಂಬಂಧಪಟ್ಟ ಸಂಸ್ಥೆಗೆ ಗುತ್ತಿಗೆಯ ಮೊತ್ತವನ್ನು 3 ತಿಂಗಳಿಗೊಮ್ಮೆ 4 ಕಂತುಗಳಲ್ಲಿ ನೀಡಬೇಕು ಎಂದು ಆಗ್ರಹಿಸಿದರು.
ಜಾಡಮಾಲಿಗಳ ವೇತನ 3500ರಿಂದ 7500 ರೂ.ಗೆ ಹೆಚ್ಚಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲೇ ಇದೆ. ಇಲಾಖೆಯ ವಿಭಾಗೀಯ ಮಟ್ಟದಲ್ಲಿ 3500 ರೂ., ಜಿಲ್ಲಾ ಮಟ್ಟದಲ್ಲಿ 3 ಸಾವಿರ ರೂ., ಉಪವಿಭಾಗೀಯ ಮಟ್ಟದಲ್ಲಿ 2500 ರೂ. ಹಾಗೂ ತಾಲೂಕು ಮಟ್ಟದಲ್ಲಿ 2 ಸಾವಿರ ರೂ. ವೇತನ ಪಡೆಯುತ್ತಿದ್ದು ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.
ಕೆಲಸ ಮಾಡುತ್ತಿರುವ ಜಾಡಮಾಲಿ ಗಳ ಪೈಕಿ ಶೇ.50 ಮಂದಿ ವಯಸ್ಸಾದವರಿದ್ದಾರೆ. ಮಹಿಳೆಯರ ಸಂಖ್ಯೆಯೂ ದೊಡ್ಡದಿದೆ. ಆದರೆ, ಇವರಿಗೆ ಸರ್ಕಾರದಿಂದ ವೈದ್ಯಕೀಯ ನೆರವು, ಕಾರ್ವಿ?ಕ ಕಲ್ಯಾಣ ನಿಧಿ ಸೇರಿ ಯಾವುದೇ ಸೌಲಭ್ಯವೂ ಇಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ನೃಪತುಂಗ ರಸ್ತೆಯ ಪೊಲೀಸ್ ಮಹಾ ನಿರ್ದೇಶಕರ ಪ್ರಧಾನ ಕಚೇರಿ ಸೇರಿದಂತೆ ಸುಮಾರು 28ವರ್ಷಗಳಿಂದ ಹಲವು ಠಾಣೆಗಳಲ್ಲಿ ಶುಚಿಗೊಳಿಸುವ ಕೆಲಸ ಮಾಡಿದ್ದೇನೆ. ಆದರೆ, ಇದೀಗ ಏಕಾಏಕಿ ಉದ್ಯೋಗ ಇಲ್ಲದಂತೆ ಆಗಿದೆ. ಪತಿ ನಿಧನವಾಗಿ 10 ವರ್ಷಗಳಿದ್ದು, ಕುಟುಂಬ ನಿರ್ವಹಣೆ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರ, ಇಲ್ಲ ,ಇಷ್ಟು ದಿನ ಕೆಲಸ ಮಾಡಿದ ಪೊಲೀಸರೇ ನನಗೊಂದು ದಾರಿ ತೋರಿಸಬೇಕು ಎಂದು ಹೇಳಿಕೊಂಡು, ಹಿರಿಯ ಜಾಡಮಾಲಿ ಮುನಿಯಮ್ಮ ಕಣ್ಣೀರು ಹಾಕಿದರು.
ಅತಿ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದ, ನಮ್ಮನ್ನು ಕೆಲಸ ತೆಗೆದು ಮನೆಗೆ ಕಳುಹಿಸುತ್ತಾರೆ ಎಂದು ಭಾವಿಸಿರಲಿಲ್ಲ. ಅಲ್ಲದೆ, ಕಡಿಮೆ ವೇತನವೂ, ಇಂದಿನ ದುಬಾರಿ ಜೀವನಶೈಲಿಯಲ್ಲಿ ಸಾಲದಾಗಿದೆ ಎಂದು ಮತ್ತೊಬ್ಬ ಜಾಡಮಾಲಿ ರತ್ನಮ್ಮ ಅಳಲು ತೋಡಿಕೊಂಡರು