ಕಾಂಗ್ರೆಸ್ ನಿಂದ ಜನಸಂಪರ್ಕ ಅಭಿಯಾನ

ಬೆಂಗಳೂರು:

       ಮುಂಬರುವ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಅಕ್ಟೋಬರ್ 2ರಿಂದ ಕಾಂಗ್ರೆಸ್ ಜನಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲು ತೀರ್ಮಾನಿಸಿದೆ.

       ಒಂದೆಡೆ ಕಾಂಗ್ರೆಸ್‍ನ ಶಾಸಕರು ಸಚಿವ ಸ್ಥಾನಕ್ಕಾಗಿ ಬಂಡಾಯ ಎದ್ದಿದ್ದರೆ, ಇತ್ತ ಲೋಕಸಭಾ ಚುನಾವಣೆಗಾಗಿ ಕಾರ್ಯಕರ್ತರನ್ನು ಹುರುದುಂಬಿಸುವ ಕೆಲಸಕ್ಕೆ ಕೆಪಿಸಿಸಿ ಚಾಲನೆ ನೀಡಿದೆ.

         ಕೇಂದ್ರದ ಬಿಜೆಪಿ ಸರ್ಕಾರದ ಹಗರಣಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲು ತೀರ್ಮಾನಿಸಿದ್ದು, ಈ ಮೂಲಕ 18 ರಿಂದ 21 ವರ್ಷ ವಯಸ್ಸಿನ ಯುವಕರನ್ನು ಪಕ್ಷದತ್ತ ಸೆಳೆಯುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.

         ಕಾಂಗ್ರೆಸ್ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಿಂದ ಲೋಕಸಭಾ ಚುನಾವಣೆಗೆ ಅಧಿಕ ಸ್ಥಾನ ಗೆದ್ದುಕೊಡುವ ಜವಾಬ್ದಾರಿ ನಮ್ಮ ಮೇಲಿದ್ದು, ಬಿಜೆಪಿ ಬಗೆಗಿನ ಜನಾಭಿಪ್ರಾಯವನ್ನು ಈಗ ರಾಷ್ಟ್ರಾಧ್ಯಂತ ಬದಲಾಗಿದೆ. ಹಲವು ಅಕ್ರಮದ ಹಗರಣದ ಆರೋಪಗಳು ಬಿಜೆಪಿ ಮೇಲಿವೆ. ಇವೆಲ್ಲದರ ವಿರುದ್ಧ ನಾವು ಹೋರಾಟ ಮಾಡಿ ಪಕ್ಷ ಸಂಘಟಿಸಬೇಕಾಗಿದೆ ಎಂದರು.

        ಅಕ್ಟೋಬರ್ 2ರಂದು ಜನಸಂಪರ್ಕ ಅಭಿಯಾನಕ್ಕೆ ಚಾಲನೆ ಸಿಗಲಿದ್ದು, ನವೆಂಬರ್ 19ಕ್ಕೆ ಅಭಿಯಾನ ಅಂತ್ಯಗೊಳ್ಳಲಿದೆ. ಮನೆಮನೆಗೆ ತೆರಳಿ ಚುನಾವಣೆಗೆ ದೇಣಿಗೆ ಸಂಗ್ರಹ, ಪ್ರತಿ ಬೂತ್‍ನಲ್ಲಿ 10 ಸಾವಿರ ದೇಣಿಗೆ ಸಂಗ್ರಹಕ್ಕೆ ನಿರ್ಧರಿಸಲಾಗಿದ್ದು, ಒಟ್ಟು ದೇಣಿಗೆ ಸಂಗ್ರಹದಲ್ಲಿ ಶೇಕಡ 50 ರಷ್ಟು ಎಐಸಿಸಿಗೆ ಹೋಗಲಿದೆ. ಉಳಿದ ದೇಣಿಗೆ ಹಣ ಕೆಪಿಸಿಸಿ, ಜಿಲ್ಲಾ ಘಟಕ ಹಾಗೂ ಬ್ಲಾಕ್ ಗಳಿಗೆ ನೀಡಲಾಗುವುದು . ಕರ್ನಾಟಕದಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

         ಕೇಂದ್ರ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಷ್ಟ್ರದಲ್ಲಿ ಬಿಜೆಪಿ ವಿರುದ್ಧ ಜನರು ಈಗ ತಿರುಗಿಬಿದ್ದಿದ್ದಾರೆ. ಮೋದಿ ಸರ್ಕಾರ ಹಗರಣದಲ್ಲಿ ಮುಳುಗಿರುವುದನ್ನು ಫ್ರಾನ್ಸ್ ಮಾಜಿ ಅಧ್ಯಕ್ಷರೇ ಹೇಳಿದ್ದಾರೆ. ನಮ್ಮ ಮೇಲೆ 2 ಜಿ, 3ಜಿ ಹಗರಣ ಎಂದು ಆರೋಪ ಮಾಡಿದ್ದರು. ಆದರೆ, ಯಾವುದು ಕೂಡ ಸಾಬೀತಾಗಿಲ್ಲ. ಈಗ ರಫೇಲ್ ಯುದ್ಧ ವಿಮಾನ ಹಗರಣ ದೇಶದ ಅತೀದೊಡ್ಡ ಹಗರಣವಾಗಿದೆ. ಬಿಜೆಪಿಗೆ ಈಗ ನಡುಕ ಶುರುವಾಗಿದೆ. ರಫೇಲ್ ಹಗರಣದ ವಿರುದ್ಧ ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದರು.

        ಭ್ರಷ್ಟಾಚಾರದ ಬಗ್ಗೆ ಮಾತನಾಡೋ ಬಿಜೆಪಿಯವರು ಈಗ ಕುದುರೆ ವ್ಯಾಪಾರ ಮಾಡಲು ಹೊರಟಿದ್ದಾರೆ. ಇವರಿಗೆಲ್ಲಿಂದ ಹಣ ಬಂತು. ನಮ್ಮಲ್ಲಿ ಒಬ್ಬರೋ ಇಬ್ಬರು ದಾರಿ ತಪ್ಪುವಂತೆ ನಡೆದುಕೊಳ್ಳುತ್ತಿರಬಹುದು. ಅವರಿಗೂ ಗೊತ್ತು ಪಕ್ಷದ ಕ್ರಮ ಹೇಗಿರತ್ತೆ ಅಂತ ಯಾವ ಬ್ಲಾಕ್ ಮೇಲ್ ಗೂ ನಾವು ಹೆದರುವುದಿಲ್ಲ. ಏನು ಮಾಡಬೇಕು ಎನ್ನುವುದು ನಮಗೆ ಗೊತ್ತು. ಎಲ್ಲವೂ ನಮ್ಮ ಗಮನದಲ್ಲಿದೆ. ಹಾಗಾಗಿ ನಾವು ಸುಮ್ಮನಿದ್ದೇವೆ ಎಂದರು.

       ಕಾಂಗ್ರೆಸ್ ಶಾಸಕರು ಚೆನ್ನೈಗೆ ತೆರಳಿದ್ದ ವಿಚಾರವಾಗಿಯೂ ಮಾತನಾಡಿದ ವೇಣುಗೋಪಾಲ್, ಚೆನ್ನೈ ಗೆ ಹೋದರೆ ತಪ್ಪೇನು. ಚೆನ್ನೈ ಸುಂದರ ನಗರ. ಹೀಗಾಗಿ ನೋಡಲು ಹೋಗುತ್ತಾರೆ. ಕಾಂಗ್ರೆಸ್ ಬಹಳ ಬಲಿಷ್ಠವಾಗಿದೆ. ನಮ್ಮವರು ಯಾರೂ ಪಕ್ಷ ಬಿಟ್ಟು ಹೋಗಲ್ಲ. ಆಪರೇಷನ್ ಕಮಲವನ್ನು ಹೇಗೆ ಎದುರಿಸಬೇಕು ಎನ್ನುವುದು ನಮಗೆ ಗೊತ್ತಿದೆ. ಅಕ್ಟೋಬರ್ 10 ರೊಳಗೆ ಸಂಪುಟ ವಿಸ್ತರಣೆ ಆಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.

        ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಪ್ರತಿವರ್ಷ ಕೂಡ ಜನಸಂಪರ್ಕ ಅಭಿಯಾನ ನಡೆಯಲಿದೆ. ಮುಂದಿನ ತಿಂಗಳಿಂದ ಜಿಲ್ಲಾ ಮಟ್ಟದಲ್ಲಿ ಸಮಾವೇಶಗಳು, ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

        ಶಾಸಕ ಸುಧಾಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ಶಿಸ್ತನ್ನು ಯಾರೇ ಉಲ್ಲಂಘಿಸಿದರೂ ಅಂತಹವರ ವಿರುದ್ಧ ಪಕ್ಷ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎನ್ನುವ ಮೂಲಕ ಅತೃಪ್ತ ಶಾಸಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link