ಮಂಡ್ಯ :
ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎದುರಲ್ಲೇ ಕಬ್ಬಿನ ಬಾಕಿ ಹಣ ಕೇಳಿದ ರೈತನ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಮದ್ದೂರು ತಾಲೂಕಿನ ಅಜ್ಜಹಳ್ಳಿ ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದ ಸಿಎಂ ಕುಮಾರಸ್ವಾಮಿ ಅವರಲ್ಲಿ ಗ್ರಾಮದ ರೈತ ರವಿ, 6 ತಿಂಗಳಿಂದ ಕಬ್ಬಿನ ಬಾಕಿ ಹಣ ನೀಡಿಲ್ಲ. ಭತ್ತಕ್ಕೆ ಬೆಂಬಲ ಬೆಲೆ ಕೂಡ ಕೊಟ್ಟಿಲ್ಲ. ರೈತರ ಸಾಲ ಮನ್ನಾ ಆಗಿಲ್ಲ. ತಮ್ಮದು ರೈತರ ಪರ ಸರ್ಕಾರ ಎಂದು ಹೇಳುತ್ತೀರಿ. ರೈತರ ರಕ್ಷಣೆಗೆ ಮೊದಲು ಕ್ರಮ ಕೈಗೊಳ್ಳಿ. ಭತ್ತ ಖರೀದಿ ಕೇಂದ್ರ ತೆರೆದಿಲ್ಲ. ಕೇಂದ್ರದಿಂದಲೂ ಹಣ ಬಂದಿಲ್ಲ ಎಂದು ರವಿ ಅವರು ಸಿಎಂ ಬಳಿ ದೂರಿದ್ದಾರೆ. ಅಲ್ಲದೇ ರೈತರ ರಕ್ಷಣೆ ಮಾಡುವ ಮೊದಲು ಈ ಕೆಲಸ ಮಾಡಿ ಎಂದು ಹೇಳಿದ್ದಾರೆ. ಚುನಾವಣೆ ಬಳಿಕ ಕ್ರಮಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಇದಾದ ಬಳಿಕ ಕೆಲ ಜೆಡಿಎಸ್ ಕಾರ್ಯಕರ್ತರು ರೈತನನ್ನು ಪಕ್ಕಕ್ಕೆ ಎಳೆದೊಯ್ದು ಪ್ರಚಾರಕ್ಕೆ ಬಂದಿರುವ ಸಿಎಂ ಅವರನ್ನೇ ಪ್ರಶ್ನಿಸುತ್ತಿಯಾ ಎಂದು ರವಿ ಅವರನ್ನು ಥಳಿಸಿದ್ದಾರೆ. ಸ್ಥಳೀಯರು ರವಿ ಬೆಂಬಲಕ್ಕೆ ನಿಂತ ಕಾರಣ ಹಲ್ಲೆಕೋರರ ಗುಂಪು ಅಲ್ಲಿಂದ ಪರಾರಿಯಾಯಿತು. ಹಲ್ಲೆ ಮಾಡುತ್ತಿರುವುದನ್ನು ಕಂಡರೂ ಕುಮಾರಸ್ವಾಮಿ ಯಾವುದೇ ಪ್ರತಿಕ್ರಿಯೆ ನೀಡದೆ, ಮುಂದಿನ ಗ್ರಾಮಕ್ಕೆ ತೆರಳಿದರು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ