ಉಡುಪಿ :
ಕನ್ನಡಾಭಿಮಾನಿ ಉದ್ಯಮಿಯೊಬ್ಬರು ತಮ್ಮ ಮಗಳಿಗೆ ಕನ್ನಡ ಎಂದು ಹೆಸರಿಟ್ಟು ಭಾಷಾಭಿಮಾನ ಮೆರೆದಿರುವ ವಿಷಯ ಈಗ ಸಾಕಷ್ಟು ಸುದ್ಧಿಯಾಗಿದೆ.
ಯುವ ಪೀಳಿಗೆಯಲ್ಲಿ ಕನ್ನಡಾಭಿಮಾನ ಮರೆಯಾಗುತ್ತಿರುವ ಸಮಯದಲ್ಲಿ ಕುಂದಾಪುರ ತಾಲೂಕಿನ ನೆಂಪುವಿನ ಕನ್ನಡ ಪ್ರೇಮಿ ದಂಪತಿ ಪ್ರತಾಪ್ ಶೆಟ್ಟಿ-ಪ್ರತಿಮಾ ತಮ್ಮ ಪುತ್ರಿಗೆ ‘ಕನ್ನಡ’ ಎಂದು ಹೆಸರಿಡುವ ಮೂಲಕ ಭಾಷೆ ಮೇಲಿನ ಅಭಿಮಾನ ಮೆರೆದಿದ್ದಾರೆ.
ಬೆಂಗಳೂರಿನಲ್ಲಿ 2019 ನ.27ರಂದು ಜನಿಸಿದ ಚೊಚ್ಚಲ ಮಗಳಿಗೆ ಮುಂದಿನ ತಿಂಗಳು ಹುಟ್ಟುಹಬ್ಬ ಸಂಭ್ರಮ. ದಂಪತಿಯ ಪುತ್ರಿಗೆ ಈಗ ವರ್ಷ ತುಂಬುತ್ತಿದ್ದು, ದಂಪತಿಯ ಕನ್ನಡ ಅಭಿಮಾನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಶೆಟ್ಟಿ, ಕಾರ್ಯನಿಮಿತ್ತ ತಮಿಳುನಾಡಿಗೆ ತೆರಳಿದ್ದಾಗ ಅಲ್ಲಿ ಅನೇಕ ಮಂದಿಯ ಹೆಸರು ತಮಿಳರಸನ್, ತಮಿಳುದೊರೈ ಮುಂತಾದ ರೀತಿಯಲ್ಲಿ ಇರುವುದನ್ನು ಗಮನಿಸಿದ್ದೆ. ಹೀಗಾಗಿ ಮಗುವಿಗೆ ಅದೇರೀತಿ ಹೆಸರು ಇಡಬೇಕು ಎಂದು ಯೋಚಿಸಿದೆ. ಈ ಮೂಲಕವಾದರೂ ಕನ್ನಡ ಪದ ಉಚ್ಚಾರಣೆಯಾಗುತ್ತಿರಲಿ ಎಂಬ ಬಯಕೆ ನನ್ನದು. ಇದಕ್ಕೆ ಪತ್ನಿಯೂ ಸಾಥ್ ನೀಡಿದ್ದಾಳೆ. ಅಷ್ಟಕ್ಕೂ ಒಂದು ವಾಕ್ಯದಲ್ಲಿ ಭಾವನೆಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ