ಬೆಂಗಳೂರು :
ಅಯೋಧ್ಯೆ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಅಯೋಧ್ಯಾದಲ್ಲಿನ ರಾಮಮಂದಿರ-ಬಾಬ್ರಿ ಮಸೀದಿ ವಿವಾದವನ್ನು ಇತ್ಯರ್ಥಪಡಿಸುವ ಸಂಬಂಧ ಸುಪ್ರೀಂಕೋರ್ಟ್ ಶೀಘ್ರದಲ್ಲಿಯೇ ಅಂತಿಮ ತೀರ್ಪು ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶ, ಪೋಸ್ಟ್ ಗಳನ್ನು ಹಾಕಬೇಡಿ ಎಂದು ತಿಳಿಸಲಾಗಿದೆ.
ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳು ಅನ್ವಯವಾಗಲಿದ್ದು ಫೇಸ್ಬುಕ್, ವಾಟ್ಸಾಪ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಧರ್ಮಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್, ವಿಡಿಯೋ ಸಂದೇಶಗಳನ್ನು ಪೋಸ್ಟ್ ಮಾಡಬೇಡಿ. ಯಾವುದೇ ರಾಜಕೀಯ, ಧಾರ್ಮಿಕ ವಿಷಯಗಳ ಬಗ್ಗೆ ನಿಂದನೆಯ ಸಂದೇಶಗಳನ್ನು ಕಳುಹಿಸುವುದು, ರವಾನಿಸುವುದು ಅಪರಾಧವಾಗಿದ್ದು, ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ರಾಮಜನ್ಮಭೂಮಿ – ಬಾಬ್ರಿ ಮಸೀದಿ ವಿಚಾರ ದೇಶದ ಅತಿ ಗಂಭೀರ ವಿಚಾರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ಸದಸ್ಯರು ಗಂಭೀರವಾಗಿ ಯೋಚಿಸಿ ಕಾನೂನು-ಸುವ್ಯವಸ್ಥೆಗೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವಂತಹ ಸಂದೇಶಗಳನ್ನು ಕಳುಹಿಸುವುದು ಅಪರಾಧವಾಗಿದ್ದು, ಹೀಗೆ ಸಂದೇಶ ಕಳುಹಿಸಿದ್ದರೆ ವಾರಂಟ್ ಇಲ್ಲದೆ ಬಂಧನಕ್ಕೆ ಒಳಗಾಗುವಿರಿ.
ಯಾರಿಂದಲೋ ಬಂದಂತಹ ಪ್ರಚೋದನಾತ್ಮಕ ಸಂದೇಶಗಳನ್ನು ಬೇರೆ ಗ್ರೂಪ್ ಗಳಿಗೆ ಮರು ಕಳುಹಿಸುವುದು ಕಂಡುಬಂದಲ್ಲಿ ಸಂದೇಶವನ್ನು ಕಳುಹಿಸಿದ ವ್ಯಕ್ತಿಯ ವಿರುದ್ಧ ಮತ್ತು ಗ್ರೂಪ್ ಅಡ್ಮಿನ್ ಅವರುಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.
ಫೇಸ್ಬುಕ್, ವಾಟ್ಸಾಪ್ ಮೊದಲಾದ ಜಾಲತಾಣಗಳಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಯಾವುದೇ ಸಂದೇಶಗಳನ್ನು ಕಳುಹಿಸದಂತೆ ಎಚ್ಚರಿಕೆ ವಹಿಸುವುದು. ಈ ವಿಚಾರ ದೇಶದ ಸಾರ್ವಭೌಮತ್ವ ಹಾಗೂ ಸೌಹಾರ್ದತೆಗೆ ನೇರವಾಗಿ ಪರಿಣಾಮ ಬೀರುವಂತಹ ವಿಚಾರವಾಗಿರುವುದರಿಂದ ಸಾಮಾಜಿಕ ಜಾಲತಾಣದ ಸದಸ್ಯರು ಈ ಬಗ್ಗೆ ಆಳವಾಗಿ ಆಲೋಚಿಸಿ. ತಪ್ಪು ಸಂದೇಶಗಳನ್ನು ಕಳುಹಿಸಬೇಡಿ. ನಿಯಮಗಳು ಹಾಗೂ ಗುಂಪುಗಳ ಬಗ್ಗೆ ಜಾಗರೂಕತೆಯಿಂದ ಇರಿ ಎಂದು ರಾಜ್ಯ ಪೊಲೀಸರು ಸಾರ್ವಜನಿಕರಿಗೆ ನಿರ್ದೇಶನ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ