ಕಾರವಾರ:
6.70 ಲಕ್ಷ ರೂ ಮೌಲ್ಯದ ಅಕ್ರಮ ಮದ್ಯವನ್ನು ಕಾರವಾರ ತಾಲ್ಲೂಕಿನ ಮಾಜಾಳಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಮಾಜಾಳಿ ಗ್ರಾಮದಲ್ಲಿರುವ ಚೆಕ್ ಪೋಸ್ಟ್ ಸಮೀಪದ ಅರಣ್ಯದಲ್ಲಿ ಅಕ್ರಮವಾಗಿ ಮದ್ಯವನ್ನು ಅಡಗಿಸಿ ಇಡಲಾಗಿತ್ತು. ಗೋವಾ ರಾಜ್ಯದ ಪರವಾನಗಿ ಹೊಂದಿದ್ದ ಮದ್ಯಗಳನ್ನು ದಾಸ್ತಾನು ಮಾಡಿರುವ ಬಗ್ಗೆ ಖಚಿತವಾದ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಲ್ಲವೂ ಗೋವಾದಲ್ಲಿ ತಯಾರಾಗಿದ್ದು, 64 ಗೋಣಿಚೀಲಗಳಲ್ಲಿ ತುಂಬಿಡಲಾಗಿತ್ತು. ಅವುಗಳಲ್ಲಿ 1,423 ಲೀಟರ್ ಮದ್ಯ, 288 ಲೀಟರ್ ಬಿಯರ್ ಪತ್ತೆಯಾಗಿದೆ. ಎಲ್ಲವನ್ನೂ ರಾತ್ರಿ ತಲೆಹೊರೆಯ ಮೇಲೆ ತಂದ ಸಿಬ್ಬಂದಿ, ಅಧಿಕಾರಿಗಳ ವಶಕ್ಕೆ ನೀಡಿದರು.
ಅಕ್ರಮವಾಗಿ ಗೋವಾದಿಂದ ಮದ್ಯವನ್ನು ಕರ್ನಾಟಕದ ಗಡಿಯೊಳಗೆ ತಂದು ದಾಸ್ತಾನು ಮಾಡಲಾಗಿತ್ತು. ಗೋವಾದಲ್ಲಿ ಮದ್ಯದ ದರ ಕಡಿಮೆ ಇದ್ದು, ಅದನ್ನು ಅಕ್ರಮವಾಗಿ ಕಾರವಾರ ಸೇರಿದಂತೆ ಗಡಿ ಭಾಗಗಳಿಗೆ ತಂದು ಕರ್ನಾಟಕದ ದರದಲ್ಲಿ ಮಾರಾಟ ಮಾಡಿ ಹಣ ಗಳಿಸುವ ದಂಧೆ ನಡೆಯುತ್ತಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
