ರೌಡಿಶೀಟರ್ ಕುಣಿಗಲ್ ಗಿರಿ ಅರೆಸ್ಟ್ !!

ಬೆಂಗಳೂರು:

      ಪೊಲೀಸರ ಕಣ್ಣಿಗೆ ಕಾಣದೇ ತಲೆಮರೆಸಿಕೊಂಡು ಓಡಾಡುತ್ತಿರುವ ಕುಖ್ಯಾತ ಕಳ್ಳ ಕುಣಿಗಲ್ ಗಿರಿಯನ್ನು ಕೋರಮಂಗಲ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.

      ಕೋರಮಂಗಲದ ಪಬ್ ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಕುಣಿಗಲ್ ಗಿರಿಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ನಂತರ ಪೊಲೀಸರು ದಾಳಿ ನಡೆಸಿ ಗಿರಿಯನ್ನು ಬಂಧಿಸಿದ್ದಾರೆ.

      ಹಲವು ಅಪರಾಧಗಳಲ್ಲಿ ಭಾಗಿಯಾಗಿರುವ ಗಿರಿ, ಇತ್ತೀಚೆಗಷ್ಟೇ ರೌಡಿ ಪರೇಡ್‌ಗೆ ಬಂದಿದ್ದ. ಅದಾದ ನಂತರ ಆತನನ್ನು ಕ್ರಿಕೆಟ್‌ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರಬಂದ ಆತ, ಕ್ರಿಕೆಟ್ ಬೆಟ್ಟಿಂಗ್ ದಂಧೆ ಮುಂದುವರಿಸಿದ್ದ. ಈ ಸಂಬಂಧ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧನದ ಭೀತಿಯಲ್ಲಿ ಆತ ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

Related image

      ಒಂದು ತಿಂಗಳ ಹಿಂದೆ, ಜೂನ್ ಹದಿನಾರನೇ ತಾರೀಕಿನಂದು ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಡ್ಯಾನ್ಸ್ ಬಾರ್ ವೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ತನ್ನ ಜನ್ಮ ದಿನಾಚರಣೆಗಾಗಿ ಕುಣಿಗಲ್ ಗಿರಿಯು ಬೆಂಗಳೂರು ಹಾಗೂ ಇತರೆಡೆಯ ರೌಡಿಗಳಿಗಾಗಿ ದೊಡ್ಡ ಮಟ್ಟದಲ್ಲಿ ಪಾರ್ಟಿಯೊಂದನ್ನು ಆಯೋಜಿಸಿದ್ದ.  ಅಲ್ಲದೇ 250 ಹೆಚ್ಚು ಯುವತಿಯರನ್ನು ಆ ದಿನ ನೃತ್ಯ ಮಾಡಿಸುವ ಸಲುವಾಗಿ ಕರೆಸಿದ್ದ.  ಪೊಲೀಸರು ದಾಳಿ ನಡೆಸಿದ ವೇಳೆ ಕುಣಿಗಲ್ ಗಿರಿ ಅಲ್ಲಿಂದ ಪರಾರಿಯಾಗಿದ್ದ.

      ಹೀಗೆ ಪದೇಪದೇ ತಪ್ಪಿಸಿಕೊಳ್ಳುತ್ತಿದ್ದ ಗಿರಿಯನ್ನು ಬಂಧಿಸಲು ಬೆಂಗಳೂರು ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ಸೂಚನೆ ನೀಡಿದ್ದರು. ‘ಅಪರಾಧ ಕೃತ್ಯ ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಕುಣಿಗಲ್ ಗಿರಿಗೆ ಅವರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

      ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ನವನು ಎಚ್.ವಿ.ಗಿರೀಶ್ ಅಲಿಯಾಸ್ ಕುಣಿಗಲ್ ಗಿರಿ. ಆತನ ತಂದೆ ಅರ್ಚಕರು. ದರೋಡೆ, ಡಕಾಯಿತಿ, ಹಫ್ತಾ ವಸೂಲಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಕಾನೂನುಬಾಹಿರ ಚಟುವಟಿಕೆ ಸೇರಿ ತೊಂಬತ್ತೆರಡು ಪ್ರಕರಣಗಳು ಕುಣಿಗಲ್ ಗಿರಿಯ ಮೇಲಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ