ಮಂಡ್ಯ:
ರೆಬಲ್‌ಸ್ಟಾರ್ ಅಂಬರೀಷ್ ಹೆಸರಿನಲ್ಲಿ ಮಣ್ಣಿಗೆ ಬಿತ್ತಿದ ಭತ್ತದ ಬೀಜ ಮೊಳಕೆಯೊಡೆದಿದೆ. ಸೋಂಪಾಗಿ ಬೆಳೆದಿರುವ ಪೈರು ‘ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣ’ ಎಂದು ಕೂಗಿ ಹೇಳುವಂತಿದೆ.
ತಾಲ್ಲೂಕಿನ ಮೊತ್ತಹಳ್ಳಿ ಗ್ರಾಮದ ಎಂ.ಪಿ.ಹರ್ಷಿತ್, ರಾಜು ಕಾಳಪ್ಪ, ಎಂ.ಜೆ.ದಿಲೀಪ್ ಕುಮಾರ್ ಸಹೋದರರು ಬೇಸಿಗೆ ಬೆಳೆಗೆ ಕಳೆದ 15 ದಿನಗಳ ಹಿಂದೆ ಒಂದು ಗುಂಟೆ ಗದ್ದೆಯಲ್ಲಿ ಭತ್ತದ ಹೊಟ್ಟಲು ಹಾಕಿದ್ದಾರೆ. ಗದ್ದೆಯ ನಡುವೆ ಹೃದಯಾಕಾರದಲ್ಲಿ ‘ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣ’ ಎಂದು ಬರೆದು ಬಿತ್ತನೆ ಬೀಜ ಬಿತ್ತಿದ್ದಾರೆ. ಈಗ ಪೈರು ಮೇಲಕ್ಕೆ ಬೆಳೆದು ಬಂದಿದ್ದು ಅಂಬರೀಷ್ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ.