ಮಂಗಳೂರು:
ಮಂಗಳೂರಿನಲ್ಲಿನ ಡ್ರಗ್ಸ್ ಜಾಲದ ಬೆನ್ನು ಬಿದ್ದಿದ್ದ ದಕ್ಷ ಅಧಿಕಾರಿಯ ವರ್ಗಾವಣೆ ಆದೇಶಕ್ಕೆ ನಾಗರೀಕರು ಸರ್ಕಾರದ ವಿರುದ್ಧ ತಿರುಗಿಬಿದ್ದ ಕಾರಣ, ರಾಜ್ಯ ಸರ್ಕಾರ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯಕ್ ವರ್ಗಾವಣೆಗೆ ಬ್ರೇಕ್ ಹಾಕಿದೆ.
ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಡ್ರಗ್ಸ್ ಜಾಲದ ತನಿಖೆ ಕರಾವಳಿಯಲ್ಲೂ ಭಾರಿ ಸಂಚಲನ ಮೂಡಿಸಿದೆ.
ಡ್ರಗ್ಸ್ ಪ್ರಕರಣದ ತನಿಖೆ ಈಗಷ್ಟೇ ಆರಂಭವಾಗಿದ್ದು, ಡ್ರಗ್ಸ್ ಕೇಸ್‍ನ ತನಿಖೆ ನಡೆಸುತ್ತಿರುವ ಮಂಗಳೂರು ಸಿಸಿಬಿ ತಂಡದ ತನಿಖಾಧಿಕಾರಿ ಶಿವಪ್ರಕಾಶ್ ನಾಯಕ್ ರನ್ನು ಡ್ರಗ್ಸ್ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ವರ್ಗಾವಣೆ ಮಾಡಿದ್ದರ ಬಗ್ಗೆ ಅನೇಕರು ಕಿಡಿಕಾರಿದ್ದರು.
ಡ್ರಗ್ ಪೆಡ್ಲರ್ ಕಿಶೋರ್ ಶೆಟ್ಟಿಯನ್ನು ಪ್ರಕರಣದಿಂದ ಕೈಬಿಡಲು ಶಿವಪ್ರಕಾಶ್ ಮೇಲೆ ಒತ್ತಡ ಬಂದಿತ್ತು. ಕರಾವಳಿಯ ಪ್ರಭಾವಿ ಶಾಸಕರು ಬಂಧಿಸದಂತೆ ಒತ್ತಡ ಹೇರಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ರಾಜಕಾರಣಿಯ ಒತ್ತಡಕ್ಕೆ ಮಣಿಯದೇ ಕಿಶೋರ್‌ನನ್ನು ಶಿವಪ್ರಕಾಶ್ ನಾಯ್ಕ್ ಬಂಧಿಸಿದ್ದರು. ಅಲ್ಲದೇ ನಿರೂಪಕಿ ಅನುಶ್ರೀ ಹೆಸರು ಹೇಳಿದ್ದ ಡ್ಯಾನ್ಸರ್ ಕಿಶೋರ್ ರಕ್ಷಣೆಗೆ ಭಾರೀ ಒತ್ತಡ ಹೇರಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಈ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತು ಮಂಗಳೂರು ಪೊಲೀಸ್ ವಲಯದಿಂದ ಕೇಳಿ ಬರುತ್ತಿದೆ. ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ, ಇದೀಗ ರಾಜ್ಯ ಸರ್ಕಾರ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯಕ್ ಅವರ ವರ್ಗಾವಣೆ ಆದೇಶವನ್ನು ತಡೆ ಹಿಡಿದಿದೆ.
ಶಿವಪ್ರಕಾಶ್ ವರ್ಗಾವಣೆಗೆ ರಾಜಕೀಯ ಒತ್ತಡ ಅದರಲ್ಲೂ ಮಂಗಳೂರಿನ ಪ್ರಭಾವಿ ಶಾಸಕರ ಒತ್ತಡವೇ ಕಾರಣ ಎಂಬ ಮಾತು ಕೇಳಿಬರುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
