ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಚಿವರ ದಿಢೀರ್ ಭೇಟಿ!!

ಬೆಂಗಳೂರು:

     ಸಹಕಾರ ಸಚಿವರು ಹಾಗೂ ರಾಜರಾಜೇ ಶ್ವರಿ ವಲಯ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹಲವು ಆರೋಗ್ಯ ಸಮುದಾಯ ಕೇಂದ್ರಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ವ್ಯವಸ್ಥೆ ಹಾಗೂ ಸಮಸ್ಯೆಗಳ ಬಗ್ಗೆ ವೈದ್ಯಾಧಿಕಾರಿಗಳ ಬಳಿ ತಿಳಿದುಕೊಂಡರು.

      ಕೆಂಗೇರಿ ಕೋಟೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೊದಲು ಭೇಟಿ ನೀಡಿದ ಸಚಿವರು, ಹೊರ ರೋಗಿಗಳ ಸಹಿತ ಕೋವಿಡ್ ಸೋಂಕಿತರಿಗೆ ಯಾವ ರೀತಿ ವ್ಯವಸ್ಥೆ ಮಾಡಲಾಗಿದೆ ಎಂದು ಪರಿಶೀಲನೆ ನಡೆಸಿದರು. ಬಳಿಕ ಕೇಂಗೇರಿ ಉಪ ವಲಯದ ಪ್ರಾಥಮಿಕ ಆರೋಗ್ಯ ಕೇಂದ್ರ, ಉಲ್ಲಾಳು ಉಪನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಹೇರೋಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಿಪ್ಪೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿಗಳನ್ನು ಕೂಲಂಕಷವಾಗಿ ಅವಲೋಕಿಸಿದರು.

      ರಾಪಿಡ್ ಆ್ಯಂಟಿಜನ್ ಟೆಸ್ಟ್ ಹಾಗೂ ಹೋಂ ಐಸೋಲೇಶನ್ ಕೇಂದ್ರಗಳಿಗೆ ನಿರಂತರ ಭೇಟಿ ಕೊಡಲಾಗುತ್ತಿದೆಯೇ? ಅವರಿಂದ ಯಾವುದೇ ದೂರುಗಳು ಬರುತ್ತಿಲ್ಲವೇ? ಅವರಿಗೆ ಅಲ್ಲಿ ವ್ಯವಸ್ಥೆ ಬಗ್ಗೆ ನಿರಂತರವಾಗಿ ವಿಚಸರಿಸುವ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ? ಡಿ ಗ್ರೂಪ್ ನೌಕರರು ಹಾಗೂ ನರ್ಸ್ ಸೇರಿದಂತೆ ಸಿಬ್ಬಂದಿ ಕೊರತೆ ಇದೆಯೇ? ಎಂಬಿತ್ಯಾದಿ ಸಮಸ್ಯೆಗಳ ಬಗ್ಗೆ ಸಚಿವರು ಖುದ್ದು ಮಾಹಿತಿ ಪಡೆದುಕೊಂಡರು.

      ನಾನ್ ಕೋವಿಡ್ ರೋಗಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಬಗ್ಗೆ ದೂರುಗಳು ಬರಬಾರದು. ವೈದ್ಯರು ಹಾಗೂ ಸಿಬ್ಬಂದಿ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಮುಂದೆ ದೂರುಗಳು ಬರದಂತೆ ಕಾರ್ಯನಿರ್ವಹಿಸಿ ಎಂದು ಸಚಿವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

      ಜ್ಞಾನಭಾರತಿಯಲ್ಲಿ ಈ ಭಾಗದಿಂದ ದಾಖಲಾಗಿರುವ ಕೋವಿಡ್ ಸೋಂಕಿತರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಹೇಗಿದೆ? ಅಲ್ಲಿಗೆ ವೈದ್ಯಾಧಿಕಾರಿಗಳು ಖುದ್ದು ಭೇಟಿ ನೀಡುತ್ತಿದ್ದಾರೆಯೇ? ಅಲ್ಲಿ ದಾಖಲಾಗಿರುವ ಕೊರೋನಾ ಸೋಂಕಿತರಿಂದ ಯಾವುದಾದರೂ ದೂರುಗಳು ಬಂದಿವೆಯೇ? ಎಂಬ ಬಗ್ಗೆ ವೈದ್ಯಾಧಿಕಾರಿ ಬಳಿ ವಿಚಾರಿಸಿದ ಸಚಿವರು, ಯಾವುದೇ ದೂರುಗಳು ಬರದಂತೆ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದರು.

       ಹೋಂ ಐಸೋಲೇಶನ್ ಮಾಡಬೇಕಾದಲ್ಲಿ ಆ ಮನೆಯಲ್ಲಿ ಪ್ರತ್ಯೇಕ ಕೊಠಡಿ, ಸ್ನಾನದ ಗೃಹಗಳ ವ್ಯವಸ್ಥೆ ಇದೆಯೇ? ಮನೆಯಲ್ಲಿ ಯಾವ ವಯಸ್ಸಿನವರು ಇದ್ದಾರೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಶೀಘ್ರ ರಾಪಿಡ್ ಕಿಟ್ ವಿತರಣೆ :

       ರಾಪಿಡ್ ಕಿಟ್ ಬೇಕೆಂಬ ಬಗ್ಗೆ ಎಲ್ಲ ಕಡೆಗಳಿಂದ ಬೇಡಿಕೆಗಳು ಕೇಳಿಬರುತ್ತಿದ್ದು, ಶೀಘ್ರದಲ್ಲೇ ಪೂರೈಸುತ್ತೇನೆ. ಈ ಕ್ಷೇತ್ರಗಳ ಶಾಸಕನಾಗಿ ಅದು ನನ್ನ ಕರ್ತವ್ಯ ಕೂಡ ಆಗಿದೆ. ಜೊತೆಗೆ ಕೋವಿಡ್ ಉಸ್ತುವಾರಿಯೂ ಆಗಿರುವುದರಿಂದ ಖುದ್ದು ನಾನೇ ಎಲ್ಲ ಕಡೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.

ಪಾಂಪ್ಲೆಟ್ ಅನ್ನು ಬೇಗ ವಿತರಿಸಿ :

      ಸೋಂಕು ದೃಡಪಟ್ಟರೆ, ಸೋಂಕಿನ ಲಕ್ಷಣ ಬಂದರೆ ಯಾರನ್ನು ಸಂಪರ್ಕ ಮಾಡಬೇಕು? ನೋಡಲ್ ಅಧಿಕಾರಿ, ಬಿಬಿಎಂಪಿ ಅಧಿಕಾರಿ, ಕಾರ್ಪೋರೇಟರ್ ಹಾಗೂ ನನ್ನನ್ನೂ ಸಂಪರ್ಕ ಮಾಡಬಹುದಾಗಿದ್ದು, ಮೊಬೈಲ್ ಸಂಖ್ಯೆಗಳ ಸಹಿತ ಬೇಕಿರುವ ಮಾಹಿತಿಯನ್ನೊಳಗೊಂಡ ಪಾಂಪ್ಲೆಟ್ ಅನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಸ್ಥಳೀಯ ಕಾರ್ಪೊರೇಟರ್ ಗಳು ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.

ಆಶಾ ಕಾರ್ಯಕರ್ತೆಯರ ಬಳಿಯೂ ಪ್ರಶ್ನೆ..:

      ಯಾವ ರೀತಿ ಕೆಲಸ ಮಾಡುತ್ತಿದ್ದೀರಿ ಎಂದು ಸಚಿವರು, ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಕೇಂದ್ರಗಳಲ್ಲಿಯೇ ಪ್ರಶ್ನೆ ಮಾಡಿ, ಸೂಕ್ತವಾಗಿ ಕಾರ್ಯನಿರ್ವಹಿಸಿ, ಈಗಾಗಲೇ ಸ್ಪಂದಿಸುತ್ತಿರುವಂತೆ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಸೇವೆ ಮಾಡಿ ಸರ್ಕಾರ ನಿಮ್ಮ ಪರವಾಗಿದೆ. ಬೇಕಾದ ಸೌಕರ್ಯವನ್ನು ಮಾಡಿಕೊಡುತ್ತದೆ ಎಂದು ಸಚಿವರು ಅಭಯ ನೀಡಿದರು.

ಕರೆ ಮಾಡಿ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಿ :

      ಶ್ರೀ ಶ್ರೀ ರವಿಶಂಕರ್ ಆಶ್ರಮ, ಜ್ಞಾನಭಾರತಿ ಸೇರಿದಂತೆ ಇತರ ಕಡೆಗಳಲ್ಲಿ ದಾಖಲಾಗಿರುವವರಲ್ಲಿ ಯಾವುದಾದರೂ ಆಯ್ದ ಕೆಲವು ಸೋಂಕಿತರಿಗೆ ಕರೆ ಮಾಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ವಿಚಾರಿಸಿ ಸಮಸ್ಯೆಗಳಿದ್ದರೆ ಬಗೆಹರಿಸಿ, ನಿಮ್ಮ ಮಟ್ಟದಲ್ಲಿ ಪರಿಸ್ಥಿತಿ ಬಗೆಹರಿಯದಿದ್ದರೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಇಲ್ಲವೇ ನನಗೆ ತಿಳಿಸಿದರೆ ಸಮಸ್ಯೆಗಳನ್ನು ಬಗೆಹರಿಸಲಾಗಿವುದು. ಈ ರೀತಿ ಕರೆ ಮಾಡಿ ನಿರ್ವಹಣೆ ಮಾಡಲು ಯಾರಿಗಾದರೂ ಜವಾಬ್ದಾರಿ ವಹಿಸಿ ಎಂದು ಸಚಿವರಾದ ಸೋಮಶೇಖರ್ ಸೂಚನೆ ನೀಡಿದರು.

ಚುರುಕು ನೀಡಲು ದಿಡೀರ್ ಭೇಟಿ :

       ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕೋವಿಡ್ ಆಸ್ಪತ್ರೆಗಳು, ಝೋನಲ್ ಕಮಾಂಡರ್ ಸೆಂಟರ್ ಗಳಿಗೆ ಭೇಟಿ ನೀಡಿ ಪರಿಸ್ಥಿತಿಗಳ ಅವಲೋಕನವನ್ನು ಪ್ರತಿದಿನ ಮಾಡುತ್ತಿದ್ದು, ಸೋಮವಾರದಿಂದ ಮತ್ತಷ್ಟು ಚುರುಕು ನೀಡುವ ಸಲುವಾಗಿ ದಿಡೀರ್ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಸಮಸ್ಯೆ ನಿವಾರಣೆ ಪ್ರಥಮ ಆದ್ಯತೆ 

       ನರ್ಸ್ ಗಳು, ಡಿ ಗ್ರೂಪ್ ನೌಕರರ ಸಮಸ್ಯೆಗಳು ಆಗುತ್ತಿವೆಯೇ? ಕೋವಿಡ್ ಕಿಟ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಇವೆಯೇ ಎಂಬೆಲ್ಲ ಮಾಹಿತಿಗಳ ಬಗ್ಗೆ ಪ್ರತಿ ಆರೋಗ್ಯ ಕೇಂದ್ರದಲ್ಲಿ ವೈದ್ಯರನ್ನು ಕೇಳಿ ತಿಳಿದುಕೊಳ್ಳುತ್ತಿದ್ದೇನೆ. ಮನೆಯಲ್ಲಿ ಎಷ್ಟು ಜನ ಇದ್ದಾರೆ? ಆಸ್ಪತ್ರೆಯಲ್ಲಿ ಎಷ್ಟು ಜನ ಇದ್ದಾರೆ? ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಬರುತ್ತಿದೆಯೇ? ಊಟ ಸೇರಿದಂತೆ ಇನ್ನಿತರ ಸೌಲಭ್ಯ ಯಾವುದಾದರೂ ಇದೆಯಾ ಎಂಬ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಈ ಎಲ್ಲ ಸಮಸ್ಯೆಗಳನ್ನು ಅರಿತು ನಾನು ನಾಳೆ ರಾಜರಾಜೇಶ್ವರಿ ನಗರ ವಲಯಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳ ಜೊತೆ ಸಭೆ ಇದ್ದು, ಅವರಿಗೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆಯಲಾಗುವುದು. ಈ ಮೂಲಕ ಸಮಸ್ಯೆಗಳ ನಿವಾರಣೆ ನನ್ನ ಪ್ರಥಮ ಆದ್ಯತೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ವೈದ್ಯರು ಧೈರ್ಯ ಹೇಳಲಿ

      ವೈದ್ಯರು ಸಹ 24×7 ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಪಾಸಿಟಿವ್ ಪತ್ತೆಯಾದ ಬಳಿಕ ಅವರಿಗೆ ಧೈರ್ಯ ಹೇಳುವ ಕೆಲಸ ಆಗಬೇಕು. ವೈದ್ಯರು ನೀಡುವ ಧೈರ್ಯವೇ ಸೋಂಕಿತರನ್ನು ಶೇಕಡಾ 50 ಗುಣಮುಖರನ್ನಾಗಿ ಮಾಡುತ್ತವೆ. ಆ ಕೆಲಸ ಪ್ರತಿಯೊಬ್ಬ ವೈದ್ಯಕೀಯ ಸಿಬ್ಬಂದಿಯಿಂದ ಆಗಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.

ಕೊರೋನಾ ವಾರಿಯರ್ಸ್ ಗಳಿಗೆ ಪ್ರತ್ಯೇಕ ಬೆಡ್ :

      ಪೊಲೀಸ್ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಕೆಲಸ ನಿರ್ವಹಣೆ ಮಾಡಲಾಗುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಗ್ಗೆ ಸರ್ಕಾರದಿಂದಲೂ ಆದೇಶವಿದೆ. ಜೊತೆಗೆ ಖಾಸಗಿ ಆಸ್ಪತ್ರೆಗಳಿಂದ ಶೇ. 50 ಹಾಸಿಗೆ ಕೊಡಬೇಕೆಂಬ ನಿಟ್ಟಿನಲ್ಲಿ ಆದೇಶವಿರುವುದರಿಂದ ಎಲ್ಲ ಕಡೆ ಸಹಕಾರ ಸಿಗುತ್ತಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳ ಜೊತೆಗೂ ಮಾತುಕತೆಗಳನ್ನು ನಡೆಸಲಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಲಾಕ್ ಡೌನ್ ಪರಿಹಾರವಲ್ಲ :

ವೈಯುಕ್ತಿಕವಾಗಿ ನಾನು ಲಾಕ್ ಡೌನ್ ವಿರೋಧಿ, ಕೆಲವು ತಾಂತ್ರಿಕ ಕಾರಣದಿಂದ ಈ ಬಾರಿ ಒಂದು ವಾರ ಕಾಲ ಲಾಕ್ ಡೌನ್ ಮಾಡಿ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದರು. ಲಾಕ್ ಡೌನ್ ಮಾಡುವುದರಿಂದ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂಬುದು ಸುಳ್ಳು. ಇದರಲ್ಲಿ ಸಾರ್ವಜನಿಕರೂ ಸಹ ಎಚ್ಚರಿಕೆ ವಹಿಸಬೇಕು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಸಮಿತಿ ರಚನೆ ಮಾಡಲಾಗಿದೆ :

ಸಾರ್ವಜನಿಕರಲ್ಲಿ ಅರಿವು ಜಾಸ್ತಿ ಇದೆ. ರೋಗ ಲಕ್ಷಣಗಳು ಕಂಡುಬಂದರೆ ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ. ಇನ್ನು ಕೆಲವರು ಆರೋಗ್ಯವಾಗಿದ್ದರೂ ಪರೀಕ್ಷೆ ಮಾಡಿ ಎಂಬ ದೂರುಗಳು ಕೇಳಿಬಂದಿವೆ. ಅದಕ್ಕೆ ಅರಿವು ಮೂಡಿಸಲಾಗುತ್ತದೆ. ಒಂದು ಝೋನ್ ಗೆ ಐವರು – ಆರು ಮಂದಿಯಂತೆ ಸಮಿತಿ ರಚಿಸಿ ಆಶಾ ಕಾರ್ಯಕರ್ತೆಯರನ್ನೂ ಅದಕ್ಕೆ ನಿಯೋಜಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಬಿಪಿ ಪರೀಕ್ಷೆ ಮಾಡಿಸಿಕೊಂಡ ಸಚಿವರು :

      ಹೇರೋಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವತಃ ಸಚಿವ ಸೋಮಶೇಖರ್ ಅವರು ಬಿಪಿ ಪರೀಕ್ಷೆ ಮಾಡಿಸಿಕೊಂಡರು. ಬಳಿಕ ಮಾತ್ರೆ, ಔಷಧಗಳ ದಾಸ್ತಾನುಗಳ ಬಗ್ಗೆ ಪರಿಶೀಲನೆ ನಡೆಸಿದರು.

ಪೆನ್ನು – ಪೇಪರ್ ಹಿಡಿದು ಲೆಕ್ಕ 

       ಸಚಿವ ಸೋಮಶೇಖರ್ ಅವರು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದಾಗಲೂ ಕೈಯಲ್ಲಿ ಪೆನ್ನು ಹಾಗೂ ಪೇಪರ್ ಅನ್ನು ಹಿಡಿದುಕೊಂಡು, ಆಯಾ ವ್ಯಾಪ್ತಿಯಲ್ಲಿರುವ ಪಾಸಿಟಿವ್ ಸೋಂಕಿತರ ಸಂಖ್ಯೆ ಎಷ್ಟು? ಎಷ್ಟು ಮಂದಿ ಮೃತಪಟ್ಟಿದ್ದಾರೆ? ಎಂಬಿತ್ಯಾದಿ ಮಾಹಿತಿಗಳನ್ನು ಅಲ್ಲಿನ ವೈದ್ಯಾಧಿಕಾರಿಗಳ ಬಳಿ ಕೇಳಿ ಸ್ವತಃ ಲೆಕ್ಕವನ್ನು ಪಟ್ಟಿ ಮಾಡಿಕೊಳ್ಳುತ್ತಿದ್ದರು. ಬಳಿಕ ಆ ಲೆಕ್ಕದ ಪ್ರಕಾರ ಅಗತ್ಯ ಕ್ರಮಗಳನ್ನು ಯಾವ ರೀತಿಯಾಗಿ ಕೈಗೊಳ್ಳಬೇಕು ಎಂಬ ಬಗ್ಗೆ ಪಕ್ಕದಲ್ಲೇ ಇದ್ದ ಆರ್ ಆರ್ ನಗರ ವಲಯದ ಜಂಟಿ ಆಯುಕ್ತರಾದ ಎನ್.ಸಿ. ಜಗದೀಶ್ ಅವರಿಗೆ ಸೂಚನೆ ಕೊಡುತ್ತಿದ್ದರು.

      ಆರ್ ಆರ್ ನಗರ ವಲಯದ ಜಂಟಿ ಆಯುಕ್ತರಾದ ಎನ್.ಸಿ. ಜಗದೀಶ್, ಉಪ ವಿಭಾಗಾಧಿಕಾರಿ ಶಿವಣ್ಣ, ಸ್ಥಳೀಯ ಕಾರ್ಪೋರೇಟರ್ ಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap