ಹಾವೇರಿ
ಈ ಭಾಗದಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಸಿರಿಧಾನ್ಯಗಳ ಸಂಸ್ಕರಣಾ ಘಟಕ್ಕೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ ಎಂದು ಕೃಷಿ ಸಚಿವರಾದ ಎನ್.ಎಚ್.ಶಿವಶಂಕರ್ ರೆಡ್ಡಿ ಅವರು ಹೇಳಿದರು.
ಮಂಗಳವಾರ ಶಿಗ್ಗಾಂವ ತಾಲೂಕು ತಿಮ್ಮಾಪೂರ ಗ್ರಾಮದ ಸಿರಿಧಾನ್ಯಗಳ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿರಿಧಾನ್ಯಗಳಲ್ಲಿ ಹೆಚ್ಚಿನ ಪೌಷ್ಠಿಕಾಂಶ ಲಭ್ಯವಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸಿರಿಧಾನ್ಯಗಳ ಸಂಸ್ಕರಣಾ ಘಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶಿಗ್ಗಾಂವ ಏತ ನೀರಾವರಿ ಯೋಜನೆಯಿಂದ 9,900 ಹೆಕ್ಟೇರ್ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಈ ಪ್ರದೇಶದಲ್ಲಿ ಕೃಷಿ ಇಲಾಖೆಯಿಂದ ಯಾವ ರೀತಿ ಬೆಳೆ ಪದ್ಧತಿ ಅನುಸರಿಸಬಹುದು ಹಾಗೂ ರೈತರಿಗೆ ಯಾವುದು ಸಹಕಾರಿ ಹಾಗೂ ಮಾರುಕಟ್ಟೆ ಸಾಧ್ಯತೆ ಒದಗಿಸುವ ನಿಟ್ಟಿನಲ್ಲಿ ಈ ಕ್ಷೇತ್ರಕ್ಕೆ ಭೇಟಿ ನೀಡಲಾಗಿದೆ ಎಂದು ಹೇಳಿದರು.
ಬಂಕಾಪುರ ಹೋಬಳಿಯಲ್ಲಿ 2016-17ನೆಯ ಸಾಲಿನ ವಿಮೆ ಹಣ ಈವರೆಗೆ ರೈತರಿಗೆ ತಲುಪದಿರುವ ಬಗ್ಗೆ ಮಾಧ್ಯಮಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ವ್ಯವಸ್ಥೆಯಲ್ಲಿ ಲೋಪವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ವಿಮಾ ಕಂಪನಿಯೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.
ಗೋವಿನಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಸೈನಿಕ ಹುಳು ಬಾದೆ ಕಾಡುತ್ತಿದ್ದು ಈ ಹುಳು ಬಾಧೆ ಹತೋಟಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಶಾಸಕರಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಈ ಭಾಗದ 30 ಹಳ್ಳಿಗಳ್ಳಿ ಸಿರಿಧಾನ್ಯ ಬೆಳೆಯಲಾಗುತ್ತಿದ್ದು, 2008ರಲ್ಲಿ ಸಿರಿಧಾನ್ಯಗಳ ಪಾಲಿಷ್ ಮಷಿನ್ ನೀಡಲಾಗಿತ್ತು. ಇಲ್ಲಿ ಆರೇಳು ಸಿರಿಧಾನ್ಯಗಳನ್ನು ಪಾಲಿಸಿಮಾಡಿ ಪ್ಯಾಕೇಟ್ ಮಾಡಲಾಗುತ್ತಿದೆ. ಕೃಷಿ ಔದ್ಯೋಗಿಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಧನ ಸಹಾಯ ನೀಡಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ಮುಂದೆಬರಬೇಕು ಎಂದು ಹೇಳಿದರು.
ಪರಿಶೀಲನೆ:
ಕೃಷಿ ಸಚಿವರಾದ ಎನ್.ಎಚ್.ಶಿವಶಂಕರ್ ರೆಡ್ಡಿ ಅವರು ಶಿಗ್ಗಾಂವ ಏತ ನೀರವಾರಿ ಯೋಜನೆ ಸ್ಥಳಕ್ಕೆ ಹಾಗೂ ಬಾಡ ಕನಕದಾಸರ ಅರಮನೆಗೆ ಭೇಟಿ ನೀಡಿ ಪರಿಶೀಲಿಸಿದರು ಮತ್ತು ರೈತರಿಂದ ಅಹವಾಲು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಇತರರು ಉಪಸ್ಥಿತರಿದ್ದರು.