ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ 5 ವರ್ಷ ಬ್ರೇಕ್!!?

ಬೆಂಗಳೂರು:

 

      ಬೆಂಗಳೂರಲ್ಲಿ ನೂತನ ಅಪಾರ್ಟ್‌ಮೆಂಟುಗಳ ನಿರ್ಮಾಣಕ್ಕೆ ಸರ್ಕಾರ ಬ್ರೇಕ್ ಹಾಕಿದ್ದು ಮುಂದಿನ ಐದು ವರ್ಷಗಳ ಕಾಲ ಹೊಸ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಬೇಡಿ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

      ಸದಾಶಿವನಗರ ಗೃಹ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸಾಕಷ್ಟು ಅಪಾರ್ಟ್‌ಮೆಂಟ್‌ ಕಟ್ಟಲಾಗಿದೆ. ಆದರೆ, ಮಾರಾಟ ಮಾಡುವ ವೇಳೆ ಕುಡಿಯುವ ನೀರಿನಂಥ ಮೂಲಸೌಕರ್ಯ ಒದಗಿಸಿಕೊಡುವ ಭರವಸೆ ನೀಡುವುದಿಲ್ಲ. ನೀರಿನ ಅಭಾವದಿಂದ ಅಪಾರ್ಟ್‌ಮೆಂಟ್‌ನಲ್ಲಿರಿವ ಬಹುತೇಕರು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿಕೊಂಡು, ಚರ್ಮರೋಗದಂಥ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ 5 ವರ್ಷಗಳ ಕಾಲ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಅವಕಾಶ ನೀಡದೇ ಇರಲು ಚಿಂತಿಸಲಾಗಿದೆ. ಈ ಸಂಬಂಧ ಎಲ್ಲಾ ಡೆವಲಪರ್ಸ್‌ರ ಸಭೆ ನಡೆಸಿ, ಅವರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗುವುದು. ಬಳಿಕ ತೀರ್ಮಾನ ಮಾಡಲಾಗುವುದು. 5 ವರ್ಷದ ಬಳಿಕ ನಗರಕ್ಕೆ ವಿವಿಧ ಮೂಲಗಳಿಂದ ನೀರು ಸರಬರಾಜು ಆಗಲಿದ್ದು, ಈ ಸಮಸ್ಯೆ‌ ನೀಗಲಿದೆ ಎಂದರು.

      ಪ್ರಸ್ತುತ, ಇರುವ ಅಪಾರ್ಟ್‌ಮೆಂಟ್‌ನಲ್ಲಿ ಎಸ್‌ಟಿಪಿ ಅಳವಡಿಕೆ ಮಾಡಿಕೊಂಡಿದ್ದಾರಾ ಎಂಬುದನ್ನು ಪರಿಶೀಲಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

        ನಗರದಲ್ಲಿ ನೀರಿನ ಸಮಸ್ಯೆ ನೀಗಿಸಲು ಕಾವೇರಿ ಐದನೇ ಹಂತದ ಯೋಜನೆ ಪ್ರಗತಿಯಲ್ಲಿದೆ. ಆದರೆ ಇದು ಸಾಲದು. ಹೀಗಾಗಿ ಲಿಂಗನಮಕ್ಕಿ ಯಿಂದ ನೀರು ತರಲು ಡಿಪಿಆರ್‌ ಮಾಡಲು ಸೂಚಿಸಿದ್ದೇನೆ.‌ ಇದಕ್ಕೂ ವಿರೋಧ ಕೇಳಿ ಬಂದಿದೆ. ಡಿಪಿಆರ್‌ ಬಳಿಕ ಸಾಧಕ ಬಾಧಕವನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.

      ಸ್ಟೀಲ್‌ಬ್ರಿಡ್ಜ್‌ ಯೋಜನೆ ಈ ಹಿಂದೆಯೇ ಕೈಬಿಡಲಾಗಿದೆ. ಹೈಕೋರ್ಟ್‌ಗೂ ಈ ಸಂಬಂಧ ಮಾಹಿತಿ ನೀಡಿದ್ದೇವೆ. ಆದರೆ, ಇದೇ ಮಾರ್ಗವಾಗಿ ಎಲಿವೇಟೆಡ್‌ ಕಾರಿಡಾರ್ ಮಾಡಲು ಡಿಪಿಆರ್‌ ಸಿದ್ಧಪಡಿಸಲು ಸೂಚಿಸಿದ್ದೇವೆ. ಸ್ಟೀಲ್‌ ಬ್ರಿಡ್ಜ್‌ ಯೋಜನೆಯಲ್ಲಿ ಭ್ರಷ್ಟಾಚಾರ ಆಗಲಿದೆ ಎಂಬ ಕಾರಣಕ್ಕೆ ವಿರೋಧವಿತ್ತು. ಈ ಮಾರ್ಗಕ್ಕೆ ಪರ್ಯಾಯ ಯೋಜನೆಗೆ ವಿರೋಧವಿಲ್ಲ. ಹೀಗಾಗಿ ಎಸ್ಟೀಮ್‌ ಮಾಲ್‌ನಿಂದ ಚಾಲುಕ್ಯವರೆಗೆ ಎಲಿವೇಡೆಡ್‌ ಕಾರಿಡಾರ್‌ ನಿರ್ಮಿಸಲು ಡಿಪಿಆರ್‌ ಮಾಡಲಾಗುತ್ತಿದೆ. ಬಳಿಕ ಜನಾಭಿಪ್ರಾಯದ ಮೇರೆಗೆ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap