ಬೆಂಗಳೂರು :
ರಾಜಧಾನಿ ಬೆಂಗಳೂರಿನಲ್ಲಿ ಖೋಟಾನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಜಮಾಲ್, ಇಮ್ರಾನ್, ಮುಬಾರಕ್ ಎಂದು ಗುರುತಿಸಲಾಗಿದೆ. ಲಾಕ್ ಡೌನ್ ವೇಳೆಯೇ ಖೋಟಾನೋಟುಗಳನ್ನು ಮುದ್ರಣ ಆರಂಭಿಸಿದ್ದ ಆರೋಪಿಗಳು, ಬಳಿಕ ಚಲಾವಣೆ ಆರಂಭಿಸಿದ್ದರು.
ಆಟೋದಲ್ಲಿ ತೆರಳುತ್ತಿದ್ದ ಜಮಾಲ್ ಎಂಬುವವನು ಖೋಟಾನೋಟನ್ನು ಆಟೋ ಚಾಲಕನಿಗೆ ನೀಡಿದ್ದ. ನೋಟಿನ ಬಗ್ಗೆ ಅನುಮಾನಗೊಂಡ ಚಾಲಕ ನೋಟನ್ನು ಪೊಲೀಸ್ ಠಾಣೆಗೆ ತಂದಾಗ ಜಮಾಲ್ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಖೋಟಾನೋಟಿನ ದಂಧೆ ಬಗ್ಗೆ ಬಾಯಿಬಿಟ್ಟ ಜಮಾಲ್ ಸೇರಿದಂತೆ ಇಮ್ರಾನ್ ಹಾಗೂ ಮುಬಾರಕ್ ಎಂಬುವರನನ್ನು ಬಂಧಿಸಿದ್ದಾರೆ.
ಬಂಧಿತರು ಪ್ರಿಂಟರ್ ಬಳಸಿ ಬಿಲ್ ಪೇಪರ್ ಮುಖಾಂತರ 100 ರೂ. ಮುಖಬೆಲೆಯ ನಕಲಿ ನೋಟು ಮುದ್ರಿಸುತ್ತಿದ್ದು, ತನಿಖೆ ನಡೆಸಿದಾಗ ಸುಮಾರು 20 ಶೀಟ್ ಖೋಟಾನೋಟು ಪತ್ತೆಯಾಗಿದೆ. ಈವರೆಗೂ ಎಷ್ಟು ಖೋಟಾ ನೋಟು ತಯಾರಿಸಲಾಗಿದೆ ಎಂಬ ಲೆಕ್ಕಾಚಾರ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ