ಮೈಸೂರು:
ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾರಾ ಮಹೇಶ್ ಅವರ ಕಾರನ್ನು ಅರ್ಧ ನಿಮಿಷ ತಡೆದಿದ್ದ ಮುಖ್ಯ ಪೇದೆಯನ್ನು ಅಮಾನತುಗೊಳಿಸಲಾಗಿದೆ.
ಕುವೆಂಪುನಗರ ಠಾಣೆಯ ವೆಂಕಟೇಶ್ ಅಮಾನತುಗೊಂಡವರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ನಾಮಪತ್ರ ಸಲ್ಲಿಸುವ ವೇಳೆ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರ ಕಾರನ್ನು ಹೆಡ್‌ಕಾನ್‌ಸ್ಟೇಬಲ್ ವೆಂಕಟೇಶ್ ತಡೆದು ಇಲ್ಲಿ ಪ್ರವೇಶವಿಲ್ಲ ಎಂದು ಹೇಳಿದ್ದಾರೆ.
ನಗರದ ಜೆಎಲ್ ಬಿ ರಸ್ತೆಗೆ ಹೊಂದಿಕೊಂಡಂತಿರುವ ಜಿಲ್ಲಾಧಿಕಾರಿ ಕಚೇರಿ ಪ್ರವೇಶದ್ವಾರದ ಬಳಿ ಬ್ಯಾರಿಕೇಡ್ ಹಾಕಲಾಗಿತ್ತು. ಸಾ.ರಾ.ಮಹೇಶ್ ಕಾರು ತಡೆದ ಕಾನ್‌ಸ್ಟೇಬಲ್ ಕಿಟಕಿ ಗಾಜು ಇಳಿಸಿ ಸಚಿವರ ಮುಖ ನೋಡಿ, ಒಳಗೆಷ್ಟು ಮಂದಿ ಇದ್ದಾರೆ ಎಂದು ಖಚಿತಪಡಿಸಿಕೊಂಡ ಬಳಿಕ ಬಿಟ್ಟಿದ್ದಾರೆ. ಇದಕ್ಕೆ ಸುಮಾರು ಅರ್ಧ ನಿಮಿಷ ಹಿಡಿದಿದೆ.
ಇದರಿಂದ ಕೋಪಗೊಂಡ ಸಾ.ರಾ.ಮಹೇಶ್, ಕಾರಣ ಇಲ್ಲದೆ ತಡೆದಿದ್ದು ಸರಿ ಇಲ್ಲ ಎಂದು ಸ್ಥಳದಲ್ಲೇ ಪೊಲೀಸರ ಮೇಲೆ ಹರಿಹಾಯ್ದಿದ್ದಾರೆ. ಬಳಿಕ ಕಾನ್‌ಸ್ಟೇಬಲ್ ಮೇಲೆ ಕ್ರಮ ಕೈಗೊಳ್ಳಲು ಮೌಖಿಕ ಸೂಚನೆ ನೀಡಿದರು ಎನ್ನಲಾಗಿದೆ.
ಈ ವಿಚಾರವನ್ನು ಸಚಿವ ಮಹೇಶ್ ರವರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಪಿ ಎಂ.ಮುತ್ತುರಾಜ್, ಒಬ್ಬ ಅಭ್ಯರ್ಥಿ ಜತೆ ಮೂರು ವಾಹನಗಳು ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರವೇಶಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೂ, ಕಾನ್‌ಸ್ಟೇಬಲ್ ತಡೆದಿರುವುದು ತಪ್ಪು. ಹೀಗಾಗಿ, ಅಮಾನತು ಮಾಡಲಾಗಿದೆ ಎಂದು ಡಿಸಿಪಿ ಮುತ್ತುರಾಜ್ ತಿಳಿಸಿದರು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿಯ ದೇವರಾಜು ಅರಸು ಜಂಕ್ಷನ್ ಬಳಿಯೇ ಕಾರು ತಡೆದಿದ್ದ ವೆಂಕಟೇಶ್ ಅವರನ್ನು ಇದೀಗ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
