ಮಳವಳ್ಳಿ ಪ್ರಕರಣ: ಹೋಟೆಲ್‌ನಲ್ಲೇ ಆಹಾರಕ್ಕೆ ವಿಷ ಬೆರೆಸಿರುವ ಶಂಕೆ, ತನಿಖೆ ಚುರುಕು
ಮಂಡ್ಯ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅನಾಥಾಶ್ರಮದಲ್ಲಿ ವಿಷಾಹಾರದಿಂದಾಗಿ ಇಬ್ಬರು ಮೃತಪಟ್ಟ ಪ್ರಕರಣದ ತನಿಖೆ ಇದೀಗ ಚುರುಕುಗೊಂಡಿದ್ದು, ಆಹಾರ ತಯಾರಿಸಲಾದ ಹೋಟೆಲ್‌ನಲ್ಲೇ ವಿಷಕಾರಿ ಅಂಶ ಮಿಶ್ರಣ ಮಾಡಿರುವ ಶಂಕೆ ಇದಿಗ ವ್ಯಕ್ತವಾಗಿದೆ. ಕಿಡಿಗೇಡಿಗಳು ವಿಷಕಾರಿ ಪದಾರ್ಥವನ್ನು ಆಹಾರಕ್ಕೆ ಮಿಶ್ರ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಅನುಮಾನಗಳು ವ್ಯಕ್ತವಾಗಿವೆ. ಅಡುಗೆಗೆ ಬಳಸುವ ನೀರು ಅಥವಾ ಆಹಾರ ಪದಾರ್ಥದಲ್ಲಿ ಮಿಶ್ರಣ ಮಾಡಿರಬಹುದು. ಹೋಟೆಲ್ ಮಾಲೀಕ ಸಿದ್ದರಾಜು ಮೇಲಿನ ದ್ವೇಷಕ್ಕೆ ಕಿಡಿಗೇಡಿಗಳು ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸದ್ಯ ಪೊಲೀಸರು ಹೋಟೆಲ್ ಸಿಸಿಟಿವಿ ಡಿವಿಆರ್ ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಡಿವೈಎಸ್ಪಿ ಕೃಷ್ಣಪ್ಪ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.ಕಳೆದ ಶುಕ್ರವಾರ ಹೋಳಿ ಹಬ್ಬಕ್ಕೆಂದು ಉದ್ಯಮಿಯೊಬ್ಬರು ಬಾತ್ ಆರ್ಡರ್ ಕೊಟ್ಟಿದ್ದರು. ಅತಿಥಿಗಳಿಗೆ ನೀಡಿದ ಬಳಿಕ ಉಳಿದ ಆಹಾರವನ್ನು ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ನೀಡುವಂತೆ ಕಳುಹಿಸಿಕೊಡಲಾಗಿತ್ತು. ಈ ಆಹಾರ ಸೇವಿಸಿದ ಅನಾಥಾಶ್ರಮದ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಒಬ್ಬ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದ. ಆನಂತರ ಮತ್ತೊಬ್ಬ ಕೂಡ ಸಾವಿಗೀಡಾಗಿದ್ದ.