ಕುಣಿಗಲ್ :
ಸಮವಸ್ತ್ರದಲ್ಲಿದ್ದಾಗ ಮದ್ಯ ಸೇವಿಸಿದ ಆರೋಪದ ಮೇಲೆ ಎಎಸ್‌ಐ ಸೇರಿದಂತೆ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಬುಧವಾರ ಅಮಾನತುಗೊಳಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಪೊಲೀಸರು ಸಮವಸ್ತ್ರದಲ್ಲೇ ಮದ್ಯ ಸೇವಿಸುವಂತ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದಾಗಿ ಇಂತಹ ನಡತೆ ತೋರಿದಂತ ಚಿಕ್ಕನಾಯಕನಹಳ್ಳಿ ಠಾಣೆಯ ಎಎಸ್‌ಐ ಶ್ರೀನಿವಾಸ್, ತುರುವೇಕೆರೆ ತಾಲೂಕು ದಂಡಿನಶಿವರ ಠಾಣೆಯ ಕಾನ್ಸ್ ಟೇಬಲ್ ಪರಮೇಶ್ ಹಾಗೂ ಸಂತೋಷ್ ಎಂಬುವರನ್ನು ಅಮಾನತುಗೊಳಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಆಮಾನತುಗೊಂಡಿರುವಂತ ಮೂವರು ಪೊಲೀಸರನ್ನು, ಕುಣಿಗಲ್ ತಾಲೂಕಿನ ಗ್ರಾಮ ಪಂಚಾಯ್ತಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳಿಸಲಾಗಿತ್ತು. ಚುನಾವಣಾ ಕರ್ತವ್ಯ ಮುಗಿಸಿ, ಮನೆಗೆ ತೆರಳುತ್ತಿದ್ದಂತ ವೇಳೆಯಲ್ಲಿ, ಹೊಯ್ಸಳ ವಾಹನದಲ್ಲೇ ಕುಳಿತು ಸಮವಸ್ತ್ರದಲ್ಲೇ ಮದ್ಯ ಸೇವಿಸಿದ್ದರು.
ಇದನ್ನು ಗಮನಿಸಿದ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ, ಹೊಯ್ಸಳ ವಾಹನದಲ್ಲಿ ಕುಳಿತು, ಸಮವಸ್ತ್ರದಲ್ಲಿ ಮದ್ಯ ಸೇವನೆ ಎಷ್ಟು ಸರಿ ಎಂದು ಪೊಲೀಸ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆಗ ಪೊಲೀಸರು ಮತ್ತು ರಘು ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಪೊಲೀಸರ ದುಂಡಾವರ್ತನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ರಘು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವೈರಲ್ ಆಗಿರುವ ವಿಡಿಯೊ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ವಿವರಣೆ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರು ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ