ಪೋಲೀಸರ ಬಳಿ ಸಂಸದ ಪ್ರತಾಪ ಸಿಂಹ ಕ್ಷಮೆಯಾಚನೆ!

0
55

ಮೈಸೂರು:

      ವಿಜಯದಶಮಿಗೂ ಮೊದಲು ಚಾಮುಂಡಿ ಬೆಟ್ಟದಲ್ಲಿ ತಾನು ಪೊಲೀಸರಿಗೆ ಅವಮಾನಕಾರಿಯಾಗಿ ಮಾತಾಡಿದ್ದಕ್ಕೆ ಪೊಲೀಸ್ ಕಮೀಷನರ್ ಹಾಗೂ ಡಿಸಿಪಿ ಅವರ ಬಳಿ ಕ್ಷಮೆಯಾಚಿಸಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

      ಸೆ.27 ರಂದು ಬೆಟ್ಟದ ಮೇಲಿನ ಮಹಿಷಾಸುರ ಮೂರ್ತಿ ಬಳಿ ಮಹಿಷ ದಸರಾ ನಡೆಸುವ ಸಲುವಾಗಿ ಶಾಮಿಯಾನ, ವೇದಿಕೆ ಹಾಕಿ ತಯಾರಿ ಮಾಡಲಾಗುತ್ತಿತ್ತು. ಈ ವಿಷಯ ತಿಳಿದು ಪ್ರತಾಪ್ ಸಿಂಹ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ವೇದಿಕೆ ಹಾಕೋದಕ್ಕೆ ಯಾರು ನಿಮಗೆ ಅನುಮತಿ ಕೊಟ್ಟರು? ಇದನ್ನು ಮೊದಲು ಇಲ್ಲಿಂದ ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಹಾಕಲು ನೀವು ಏಕೆ ಅನುಮತಿ ನೀಡಿದ್ದೀರ ಪೊಲೀಸರೆ, ನಿಮ್ಮಿಂದ ಇಂತಹ ಕೆಲಸ ನಿರೀಕ್ಷೆ ಮಾಡಿರಲಿಲ್ಲ ಎಂದು ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದ ವೀಡಿಯೊ ವೈರಲ್ ಆಗಿತ್ತು. ಈ ವೇಳೆ ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಗ್ರಾಮ ಪಂಚಾಯತ್ ಅವರು ಮಾಡಿರುವ ಕೆಲಸ ಎಂದು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದರು.

      ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ ಮನಸ್ಸಿಗೆ ನೋವಾಯಿತು, ಘಾಸಿ ಆಯಿತು. ಶಾಮಿಯಾನ ಹಾಕಿ ಅಪಚಾರ ಮಾಡಲು ಹೊರಟಿರುವುದನ್ನು ಕಂಡು ಅವೇಶಭರಿತನಾಗಿ ಮಾತನಾಡಿದ್ದೇನೆ. ಈಗಾಗಲೇ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಹಾಗೂ ಡಿಸಿಪಿ ಮುತ್ತುರಾಜ್ ಅವರ ಬಳಿ ವೈಯಕ್ತಿಕವಾಗಿ ಕ್ಷಮೆ ಯಾಚಿಸಿದ್ದೇನೆ. ಆ ಸಂದರ್ಭದಲ್ಲಿ ನಾನು ಆವೇಶದಲ್ಲಿ ಈ ರೀತಿ ಮಾತನಾಡಿದ್ದೇನೆ ಕ್ಷಮಿಸಿ ಎಂದು ಕೇಳಿದ್ದೇನೆ. ನಾವೆಲ್ಲ ಒಂದೇ ಕುಟುಂಬದಂತೆ ಕೆಲಸ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದರು.

       ಅಧಿದೇವತೆ, ಶಕ್ತಿ ದೇವತೆ ಎಂದು ಚಾಮುಂಡೇಶ್ವರಿಯನ್ನು ಕರೆಯುವ ನಾವು, ದೇವಿಯ ಬಗ್ಗೆ ಹಗುರವಾಗಿ ಮಾತನಾಡಲು ಹಮ್ಮಿಕೊಳ್ಳುತ್ತಿದ್ದ ಕಾರ್ಯಕ್ರಮವನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಂಡಿದ್ದೇನೆ ಎಂದರು. ಮಹಿಷ ದಸರಾ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸುತ್ತಿದ್ದಾಗ ಆಕ್ರೋಶದಿಂದ ಪೊಲೀಸರಿಗೆ ನಿಂದಿಸಿದ್ದು ನಿಜ. ಮಹಿಷ ದಸರಾ ಆಚರಣೆಯಿಂದ ಜನರಿಗೆ ಬೇಸರ ಉಂಟಾಗುತ್ತದೆ ಎಂದರು.