ಬೆಳಗಾವಿ :

ಬೆಳಗಾವಿಯ ಸಾಹುಕಾರ್ ಗೋಕಾಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಇಂದು ಮೂರು ನಾಮಪತ್ರಗಳನ್ನು ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇಂದು ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ್ದರಿಂದ ಆಯಾ ಪಕ್ಷದ ಅಭ್ಯರ್ಥಿಗಳು ನಾಮಪತ್ರವನ್ನು ಬೃಹತ್ ಮೆರವಣಿಗೆ ಮೂಲಕ ತೆರಳಿ ಸಲ್ಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಿರುವ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ, ಬೆಳಿಗ್ಗೆ ಎರಡು ನಾಮಪತ್ರ ಸಲ್ಲಿಸಿದ್ದರೆ, ಮಧ್ಯಾಹ್ನ ಮತ್ತೊಂದು ನಾಮಪತ್ರವನ್ನು ಸಲ್ಲಿಸಿದ್ದಾರೆ. ಇದಕ್ಕೆ ಕಾರಣ ಅವರ ಪುರೋಹಿತರೊಬ್ಬರ ಸಲಹೆ ಎನ್ನಲಾಗಿದೆ.
ಇದೇ ಕಾರಣದಿಂದಾಗಿ ಗೋಕಾಕ್ ತಹಶೀಲ್ದಾರ್ ಕಚೇರಿಗೆ 12 ಗಂಟೆಗೆ ತೆರಳಿದ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ, ಪುರೋಹಿತರು ಸೂಚಿಸಿದ ಶುಭ ಮುಹೂರ್ತದ ಮೇರೆಗೆ ಮೊದಲ ನಾಮಪತ್ರವನ್ನು ಸಲ್ಲಿಸಿದರು. ಈ ಬಳಿಕ ಮಾತನಾಡಿದ ಅವರು ಪುರೋಹಿತರ ಸೂಚನೆಯಲ್ಲಿ ನಾನು ಮೂರು ನಾಮಪತ್ರ ಸಲ್ಲಿಸುತ್ತಿದ್ದೇನೆ. ಈಗಾಗಲೇ ಎರಡು ನಾಮಪತ್ರ ಸಲ್ಲಿಸಿದ್ದು, ಮತ್ತೊಂದು ನಾಮಪತ್ರವನ್ನು ಮಧ್ಯಾಹ್ನ ಸಲ್ಲಿಸಿದ್ದೇನೆ ಎಂದು ಹೇಳಿದರು.
ಇನ್ನು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಕೊತ್ವಾಲಗೌಡ ಮತ್ತಿತರರು ರಮೇಶ ಜಾರಕಿಹೊಳಿಗೆ ಸಾಥ್ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








