ಬೆಂಗಳೂರು :
ಬಿಜೆಪಿ ಸರ್ಕಾರದಲ್ಲಿ ಈಗಿರುವ ಡಿಸಿಎಂ ಹುದ್ದೆಗಳನ್ನು ರದ್ದು ಮಾಡುವಂತೆ ಹೇಳಿಕೆ ನೀಡಿದ್ದ ಶಾಸಕ ರೇಣುಕಾಚಾರ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಛಾಟಿ ಬೀಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಡಿಸಿಎಂ ಸ್ಥಾನದ ಅಗತ್ಯವಿಲ್ಲ, ದುರ್ಬಲ ಸಿಎಂ ಇದ್ದ ಸಂದರ್ಭದಲ್ಲಿ ಡಿಸಿಎಂ ನೇಮಕ ಮಾಡಬೇಕು ಆದರೆ ಇಲ್ಲಿ ಸಿಎಂ ಬಿಎಸ್ವೈ ಸಮರ್ಥರಿದ್ದಾರೆ ಹಾಗಾಗಿ ಮೂರೂ ಡಿಸಿಎಂ ಹುದ್ದೆಗಳನ್ನು ರದ್ದು ಮಾಡುವ ಸಂಬಂಧ ಹೈಕಮಾಂಡ್ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಈ ವೇಳೆ, ಡಿಸಿಎಂ ಹುದ್ದೆ ರದ್ದು ಕುರಿತಾಗಿ ತಮ್ಮ ಹೇಳಿಕೆಯನ್ನು ರೇಣುಕಾಚಾರ್ಯ ಸಮರ್ಥಿಸಿಕೊಂಡರು. ಡಿಸಿಎಂ ಸ್ಥಾನದ ಬಗ್ಗೆ ತಾವು ಉದ್ದೇಶಪೂರ್ವಕವಾಗಿ ಏನನ್ನೂ ಹೇಳಿಲ್ಲ. ಮಾಧ್ಯಮದವರ ಗೊಂದಲಮಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಾಗ ಈ ರೀತಿ ಹೇಳಿದ್ದೆ. ವೈಯಕ್ತಿಕ ಅಭಿಪ್ರಾಯವನ್ನಷ್ಟೇ ವ್ಯಕ್ತಪಡಿಸಿದ್ಧೇನೆ. ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಧಕ್ಕೆ ತರುವಂತಹ ಹೇಳಿಕೆ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಳೀನ್ ಕುಮಾರ್ ಕಟೀಲ್ ರವರು ಮಾತನಾಡಿ, ಇನ್ನು ಮುಂದೆ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರವಾಗುವಂತಹ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಕೊಡಬೇಡಿ. ವೈಯಕ್ತಿಕ ಅಭಿಪ್ರಾಯ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಎಂದು ಸೂಚಿಸಿದ್ದಾರೆ. ಇದೇ ವೇಳೆ, ರೇಣುಕಾಚಾರ್ಯ ಅವರಿಂದ ಡಿಸಿಎಂ ಹುದ್ದೆ ರದ್ದು ಕುರಿತು ಹೇಳಿಕೆ ನೀಡಿದ್ದ ಬಗ್ಗೆ ಲಿಖಿತ ಹೇಳಿಕೆಯನ್ನು ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
