ಬೆಂಗಳೂರು:
ಉಪ ಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ಸಚಿವರು ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪರ್ವ ಮುಂದುವರಿದಿರುವ ಬೆನ್ನಲ್ಲೇ ಇಂದು ಡಿಸಿಎಂ ಗೃಹಕಚೇರಿಯಲ್ಲಿ ನಡೆದ ಉಪಹಾರ ಕೂಟದಲ್ಲಿ ಭಾಗವಹಿಸಿ ಉಪಹಾರಕೂಟದ ಬಳಿಕ ಪರಮೇಶ್ವರ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ 22 ಸಚಿವರು ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯರಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಉಪಾಹಾರ ಕೂಟದಲ್ಲಿ ಎಂಟಿಬಿ ನಾಗರಾಜ್, ಇ. ತುಕಾರಾಂ, ಶಿವಾನಂದ ಪಾಟೀಲ್ ಭಾಗವಹಿಸಿರಲಿಲ್ಲ. ಹೀಗಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ.
ಜೆಡಿಎಸ್ ಸಚಿವರು ಕೂಡ ತ್ಯಾಗಕ್ಕೆ ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ. ಜೆಡಿಎಸ್‌ನ 9 ಸಚಿವರು ತಮ್ಮ ಹುದ್ದೆ ತ್ಯಾಗ ಮಾಡಲು ಸಿದ್ಧರಿರುವುದಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಸುಮಾರು 2 ಗಂಟೆ ಕಾಲ ನಡೆದ ಕಸರತ್ತು ಪ್ರಯೋಜನಕ್ಕೆ ಬಾರದ ಕಾರಣ ಅಂತಿಮವಾಗಿ ಕಾಂಗ್ರೆಸ್ ಕೈ ಚೆಲ್ಲಿದ್ದು, ರಾಜೀನಾಮೆ ನೀಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಆದರೆ ಸಾಮೂಹಿಕ ರಾಜೀನಾಮೆಗೆ ಕಾಂಗ್ರೆಸ್‍ನ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ರಾಜೀನಾಮೆ ನೀಡಿ ಮುಂಬೈನಲ್ಲಿರುವ 10 ಮಂದಿ ಶಾಸಕರನ್ನು ವಾಪಸ್ ಕರೆತರಲು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿದ್ದು, ಅಲ್ಲಿನ ಶಾಸಕರು ಯಾವುದೇ ಕಾರಣಕ್ಕೂ ಬರುವುದಿಲ್ಲ. ನಮ್ಮ ನಿರ್ಧಾರ ಅಚಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಇನ್ನು ಸಾಮೂಹಿಕವಾಗಿ ಎಲ್ಲಾ ಸಚಿವರು ನೀಡಿರುವ ರಾಜೀನಾಮೆ ಪತ್ರಗಳ ಜೊತೆ ಸಿಎಂ ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿಯಾಗಿ ಮೈತ್ರಿ ಸರ್ಕಾರದ ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾಹಿತಿ ನೀಡಲಿದ್ದು, ಇಂದು ಸಂಜೆಯೊಳಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ