ಬೆಂಗಳೂರು :
ಆರ್.ಆರ್. ನಗರ ಉಪ ಚುನಾವಣೆ ವೇಳೆ ಪ್ರಚಾರ ನಡೆಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಚಾರಕ್ಕೆ ತಡೆ ಮಾಡಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎನ್ನಲಾಗಿದೆ.
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ರಂಗೇರಿದ್ದು, ಯಶವಂತಪುರದ ಬಿಕೆ ನಗರದಲ್ಲಿ ಕುಸುಮಾ ಪರವಾಗಿ ಸಿದ್ದರಾಮಯ್ಯ ಪ್ರಚಾರ ನಡೆಸುವ ವೇಳೆ ಯಶವಂತಪುರದ ಬಿ.ಕೆ. ನಗರಕ್ಕೆ ಸಿದ್ದರಾಮಯ್ಯ ಅವರು ಬರುತ್ತಿದ್ದಂತೆಯೇ ಪ್ರಧಾನಿ ಮೋದಿ ಪರವಾಗಿ ಕೆಲವರು ಘೋಷಣೆ ಹಾಕಲು ಆರಂಭಿಸಿದರು. ಜೊತೆಗೆ ಸಿದ್ದರಾಮಯ್ಯ ಅವರ ವಾಹನ ಮುಂದೆ ಹೋಗದಂತೆ ತಡೆಯಲಾಯ್ತು.
ಘಟನೆಯಿಂದ ಆಕ್ರೋಶಗೊಂಡ ಸಿದ್ದರಾಮಯ್ಯ ಅವರು ಸ್ಥಳದಲ್ಲಿದ್ದ ಪೊಲೀಸರಿಗೆ ತಡೆ ಒಡ್ಡದವರನ್ನು ವಶಕ್ಕೆ ಪಡೆಯುವಂತೆ ಸಿದ್ದರಾಮಯ್ಯ ಅವರು ಸೂಚಿಸಿದರು.
ಮಾಜಿ ಕಾರ್ಪೋರೇಟರ್ ಜಿ.ಕೆ.ವೆಂಕಟೇಶ್, ಭರತ್ ಸಿಂಗ್, ಕೊತ್ತಂಬರಿ ನಾಗ, ಖಾಜಾ, ರತ್ನಮ್ಮ ಇತರೆ ಹಲವಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರಕ್ಕೆ ಅಡ್ಡಿ ಮಾಡಿದಲ್ಲದೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದ್ದು, 9 ಮಂದಿ ವಿರುದ್ಧ ಯಶವಂತಪುರ ಠಾಣೆಯಲ್ಲಿ 506, 341 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಪ್ರಚಾರಕ್ಕೆ ತಡೆಯೊಡ್ಡಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕೆಂದು ಆಗ್ರಹಿಸಿ ಸಂಸದ ಡಿ.ಕೆ. ಸುರೇಶ್, ಅಭ್ಯರ್ಥಿ ಕುಸುಮಾ ಮೊದಲಾದವರು ಯಶವಂತಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
