ತುಮಕೂರು :
ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ ಪ್ರಮುಖ ತೀರ್ಮಾನ ಕೈಗೊಂಡಿದ್ದು, ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಗಿರುವ ಡಾ. ಶಾಲಿನಿ ರಜನೀಶ್ ಅವರನ್ನು ಹಠಾತ್ತನೆ ಎತ್ತಂಗಡಿ ಮಾಡಿದೆ. ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯನ್ನಾಗಿ ನಿಯುಕ್ತಿಗೊಳಿಸಿದೆ. ಹಾಲಿ ಇವರು ಯೋಜನೆ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶಾಲಿನಿ ರಜನೀಶ್ ಬದಲಿಗೆ ತುಮಕೂರು ಜಿಲ್ಲೆಗೆ ನೂತನ ಉಸ್ತುವಾರಿ ಕಾರ್ಯದರ್ಶಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿರುವ ಎಲ್.ಕೆ. ಅತೀಕ್ ಅವರನ್ನು ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದೆ.
ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಹಾಗೂ ಯಾವುದೇ ಯೋಜನೆಗಳ ಜಾರಿ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಮಾಡಲು ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ಸರ್ಕಾರವು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಿಸುತ್ತದೆಂಬುದನ್ನು ಇಲ್ಲಿ ನೆಪಿಸಿಕೊಳ್ಳಬಹುದು.
ವರ್ಗಾವಣೆ ಬಗ್ಗೆ ಡಿ.30 ರಂದು ಸರ್ಕಾರದ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಪ್ರತಿಯು ಸಾಮಾಜಿಕ ಜಾಲತಾಣಗಳಾದ ವಾಟ್ಸ್‍ಆಪ್, ಫೇಸ್‍ಬುಕ್‍ಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತಗೊಳ್ಳುತ್ತಿವೆ.
2012 ರಿಂದ ಇದೇ ಹುದ್ದೆ
ಡಾ. ಶಾಲಿನಿ ರಜನೀಶ್ 2012 ರಿಂದಲೂ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿದ್ದರು. ಇಂತಹ ಉನ್ನತ ಸ್ಥಾನದಲ್ಲಿರುವವರು ಸಾಮಾನ್ಯವಾಗಿ 2 ಅಥವಾ 3 ವರ್ಷಗಳಿಗೊಮ್ಮೆ ವರ್ಗಾವಣೆ ಆಗುವುದು ಸಾಮಾನ್ಯ. ಆದರೆ ಇವರು ಮಾತ್ರ ಸತತ 8 ವರ್ಷಗಳಿಂದಲೂ ಇದೇ ಹುದ್ದೆಯಲ್ಲಿದ್ದರು. ಜೊತೆಗೆ ತುಮಕೂರು ಸ್ಮಾರ್ಟ್‍ಸಿಟಿ ಕಂಪನಿಯ ಆರಂಭದ ದಿನದಿಂದಲೂ ಕಂಪನಿಯ ಛೇರ್ಮನ್ ಹುದ್ದೆಯನ್ನೂ ನಿರ್ವಹಿಸುತ್ತಿದ್ದರು. ಶಾಲಿನಿ ರಜನೀಶ್ ಅವರಿಗಿಂತ ಮೊದಲು ವಿದ್ಯಾಶಂಕರ್ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿದ್ದರು.
ಸ್ಮಾರ್ಟ್‍ಸಿಟಿ ಕಂಪನಿಯ ಛೇರ್ಮನ್ ಆಗಿದ್ದ ಶಾಲಿನಿ ರಜನೀಶ್ ಅವರ ಕಾರ್ಯವೈಖರಿ ಬಗ್ಗೆ ತುಮಕೂರಿನ ಜನಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರು ಮತ್ತು ಸಂಘ-ಸಂಸ್ಥೆಗಳ ವಲಯದಲ್ಲಿ ಇತ್ತೀಚೆಗೆ ಅಸಮಾಧಾನ ಹಾಗೂ ಆಕ್ರೋಶ ಭುಗಿಲೆದ್ದಿತ್ತು. ಅಧಿಕಾರಿಗಳ ಹಾಗೂ ನೌಕರರ ವಲಯದಲ್ಲಿ ಸಹ ಅಸಮಾಧಾನದ ಹೊಗೆಯೇಳುತ್ತಿತ್ತಾದರೂ, ಅವರೆಲ್ಲರೂ ಅಸಹಾಯಕರಾಗಿದ್ದರು. ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸುವ ಹಂತದವರೆಗೂ ರಾಜಕೀಯ ನಾಯಕರು ಸಿಡಿದೆದ್ದಿದ್ದನ್ನು ಗಮನಿಸಬಹುದು.
ಸ್ಮಾರ್ಟ್‍ಸಿಟಿ ಕಂಪನಿಯ ಕಾಮಗಾರಿಗಳು ಇತ್ತೀಚೆಗೆ ವಿವಾದಕ್ಕೆ ಕಾರಣವಾಯಿತು. ಮಾಧ್ಯಮಗಳು (ವಿಶೇಷವಾಗಿ ಮೊದಲಿಗೆ ಪ್ರಜಾಪ್ರಗತಿ ಪತ್ರಿಕೆ) ಕಾಮಗಾರಿಗಳ ಅಕ್ರಮ, ಅವ್ಯವಸ್ಥೆ, ದುರವಸ್ಥೆ, ಭ್ರಷ್ಟಾಚಾರಗಳ ಬಗ್ಗೆ ಮೊದಲಬಾರಿಗೆ ದನಿಯೆತ್ತಿದವು. ಇದಕ್ಕೆ ನಾಗರಿಕರು, ಸಂಘ ಸಂಸ್ಥೆಗಳೂ ದನಿಗೂಡಿಸಿತೊಡಗಿದಾಗ, ಅನಿವಾರ್ಯವಾಗಿ ತುಮಕೂರಿನ ರಾಜಕೀಯ ನಾಯಕರು ಮಾತನಾಡತೊಡಗಿದರು. ಅವೆಲ್ಲದರ ಪರಿಣಾಮವಾಗಿ ಇದೀಗ ಹಠಾತ್ತನೆ ಶಾಲಿನಿರಜನೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಶಾಲಿನಿ ರಜನೀಶ್ ವರ್ಗಾವಣೆ ಸುದ್ದಿ ವೈರಲ್ ಆಗುತ್ತಿದ್ದಂತೆ ಸ್ಮಾರ್ಟ್‍ಸಿಟಿ ಕಂಪನಿ ಮತ್ತು ಮಹಾನಗರ ಪಾಲಿಕೆ ಕಚೇರಿಯ ಅನೇಕ ಜನರ ಮುಖದಲ್ಲಿ ಸಮಾಧಾನದ ನಿಟ್ಟುಸಿರು ವ್ಯಕ್ತವಾಯಿತೆಂದು ಹೇಳಲಾಗುತ್ತಿದೆ. ಇದು ಹೊಸವರ್ಷಕ್ಕೆ ಸಿಕ್ಕ ಕೊಡುಗೆ ಎನ್ನುವಷ್ಟರ ಮಟ್ಟಿಗೆ ಕೆಲವರ ಸಂತಸದ ಪ್ರತಿಕ್ರಿಯೆಗಳು ಕೇಳಿಬಂದಿತೆಂಬುದು ಒಂದೆಡೆಯಾದರೆ, ನಾಗರಿಕರ-ಸಂಘಸಂಸ್ಥೆಗಳ ಸಲಹೆ-ಸಹಕಾರ ಪಡೆದುಕೊಂಡು ಒಂದು ಸಾವಿರ ಕೋಟಿ ರೂ.ಗಳ ಸ್ಮಾರ್ಟ್‍ಸಿಟಿ ಯೋಜನೆಯನ್ನು ಮತ್ತಷ್ಟು ಸೊಗಸಾಗಿ ಅನುಷ್ಠಾನ ಮಾಡಬಹುದಿತ್ತು ಎಂಬುದು ಇನ್ನೊಂದಡೆ ಕೇಳಿಬಂದ ಪ್ರತಿಕ್ರಿಯೆಯಾಗಿತ್ತು.
ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಹಾಗೂ ಯಾವುದೇ ಯೋಜನೆಗಳ ಜಾರಿ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಮಾಡಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ