ಶಿರಾ :
ವಿಚ್ಛೇದನಕ್ಕೊಳಗಾದ ಮಹಿಳೆಯನ್ನು ವಿವಾಹವಾಗಿರುವುದನ್ನು ಒಪ್ಪದೆ ಪದೆ ಪದೆ ಮಗನನ್ನು ಹಿಂಸಿಸುತ್ತಿದ್ದ ತಂದೆಯೊಬ್ಬರನ್ನು ಸ್ವಂತ ಮಗನೆ ಕೊಲೆಗೈದ ಘಟನೆಯೊಂದು ತಾಲ್ಲೂಕಿನ ದ್ವಾರನಕುಂಟೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ದ್ವಾರನಕುಂಟೆ ಗ್ರಾಮದ ಹರೀಶ್ ಕಳೆದ 6 ವರ್ಷಗಳ ಹಿಂದೆ ವಿಚ್ಛೇದಿತ ಮಹಿಳೆ ಅನಿತಾರನ್ನು ಪ್ರೇಮಿಸಿ ವಿವಾಹವಾಗಿದ್ದರು ಎನ್ನಲಾಗಿದೆ. ಈ ಮದುವೆಯನ್ನು ತಂದೆ ಲಕ್ಷ್ಮಣ್ ಒಪ್ಪಿರಲಿಲ್ಲ. ವಿಚ್ಛೇದಿತ ಮಹಿಳೆಯನ್ನು ಮದುವೆ ಆಗಿದ್ದಕ್ಕೆ ತಂದೆ ಪದೆ ಪದೆ ಮಗನಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದರು ಎನ್ನಲಾಗಿದೆ.
ಈ ನಡುವೆ ಸ್ವಗ್ರಾಮವಾದ ದ್ವಾರನಕುಂಟೆಯಲ್ಲಿಯೆ ಮಗ ಹರೀಶ್ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದನು. ಹರೀಶನ ಅಂಗಡಿಗೆ ಕಳೆದ ಕೆಲ ತಿಂಗಳ ಹಿಂದೆ ತಂದೆಯೆ ಬೆಂಕಿ ಇಟ್ಟಿದ್ದರು ಎನ್ನಲಾಗಿದೆ. ಶನಿವಾರ ಸಂಜೆ ಮತ್ತೆ ಇಂತಹ ಘಟನೆ ಮರುಕಳಿಸಿದ್ದು, ಹರೀಶ್ ಮತ್ತು ತಂದೆ ಲಕ್ಷ್ಮಣ್ ನಡುವೆ ಜಗಳ ನಡೆದಿದೆ. ಈ ವೇಳೆ ಬಡಿಗೆಯಿಂದ ತಂದೆಯ ಮೇಲೆ ಹರೀಶ್ ಹಲ್ಲೆ ಮಾಡಿದ ಪರಿಣಾಮ ಲಕ್ಷ್ಮಣ್(50) ಸಾವಪ್ಪಿದ್ದಾರೆ ಎನ್ನಲಾಗಿದೆ.
ತಕ್ಷಣ ಕಾರ್ಯ ಪ್ರವೃತ್ತರಾದ ಪ.ನಾ.ಹಳ್ಳಿ ಪಿಎಸ್‍ಐ ಭಾಸ್ಕರ್ ಕೊಲೆ ಆರೋಪಿ ಹರೀಶ್ (28) ನನ್ನು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ