ಗೋಕಾಕ್ :
ಗೋಕಾಕ್ ನಲ್ಲಿ ಉಪ ಚುನಾವಣೆ ಕಣ ಮತ್ತಷ್ಟು ರಂಗೇರಿದ್ದು, ಕೊನೇ ಕ್ಷಣದ ಅಚ್ಚರಿ ಬೆಳವಣಿಗೆ ಎಂಬಂತೆ ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಕೂಡಾ ನಾಮಪತ್ರ ಸಲ್ಲಿಸಿದ್ದಾರೆ.
15 ಕ್ಷೇತ್ರಗಳಿಗೆ ಡಿ.5ರಂದು ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಸೋಮವಾರ ಕಡೇ ದಿನವಾಗಿದ್ದು, ಅಭ್ಯರ್ಥಿಗಳು ಭರ್ಜರಿ ಬಲಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಗೋಕಾಕ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ, ಕಾಂಗ್ರೆಸ್‍ನಿಂದ ಲಖನ್ ಜಾರಕಿಹೊಳಿ ಮತ್ತು ಜೆಡಿಎಸ್ ನಿಂದ ಅಶೋಕ್ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಸೋದರ ಲಖನ್ ಜಾರಕಿಹೊಳಿ ಜೊತೆ ಬಂದ ಸತೀಶ್ ಜಾರಕಿಹೊಳಿ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದ ಶಾಸಕರಾಗಿದ್ದು, ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಲೇ ಬೇಕೆಂದು ಪಣ ತೊಟ್ಟು ತಮ್ಮ ಸಹೋದರ ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಇಂದು ಅವರೇ ನಾಮಪತ್ರ ಸಲ್ಲಿಸಿರುವುದು ಕುತೂಹಲ ಕೆರಳಿಸಿದೆ.
ಲಖನ್ ಜಾರಕಿಹೊಳಿ ಅವರ ನಾಮಪತ್ರದಲ್ಲಿ ಲೋಪದೋಷಗಳು ಕಂಡು ಬಂದು ನಾಮಪತ್ರ ತಿರಸ್ಕೃತವಾದರೆ ಆಪತ್ಕಾಲಕ್ಕೆ ಇರಲೆಂಬ ಕಾರಣದಿಂದ ಸತೀಶ್ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದ್ದಾರಾದರೂ ಇನ್ನೆರಡು-ಮೂರು ದಿನಗಳಲ್ಲಿ ನಾಮಪತ್ರವನ್ನು ವಾಪಸ್ ಪಡೆಯಲಿದ್ದಾರೆ. ಒಂದು ವೇಳೆ ಲಖನ್ ಜಾರಕಿಹೊಳಿ ನಾಮಪತ್ರ ತಿರಸ್ಕೃತವಾದರೆ, ಸತೀಶ್ ಅವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ತಂತ್ರ ರಚಿಸಿಕೊಂಡಿದೆ ಎನ್ನಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ