ಬೆಂಗಳೂರು
ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ಭರ್ತಿ ಮಾಡಲು ಮೈತ್ರಿ ಸರ್ಕಾರದಲ್ಲಿ ಚಿಂತನೆ ನಡೆಸಿದ್ದು, ಕಾಂಗ್ರೆಸ್‍ನಿಂದ 6 ಹಾಗೂ ಜೆಡಿಎಸ್‍ನ 2 ಸ್ಥಾನಗಳ ಭರ್ತಿಗೆ ಎರಡೂ ಪಕ್ಷಗಳಲ್ಲೂ ಕಸರತ್ತು ಆರಂಭವಾಗಿದೆ.
ಸಚಿವ ಸಂಪುಟ ವಿಸ್ತರಣೆಗೆ ಜೆಡಿಎಸ್ ಕಡೆಯಿಂದ ಯಾವುದೇ ಅಡೆತಡೆ ಇಲ್ಲ. ಇರುವ ಎರಡು ಸ್ಥಾನವನ್ನು ಯಾರಿಗೆ ಕೊಡ ಬೇಕೆಂಬುದನ್ನು ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡರು ನಿರ್ಧರಿಸಿದ್ದು, ಒಂದು ಅಲ್ಲಸಂಖ್ಯಾತ, ಒಂದು ಪರಿಶಿಷ್ಟ ಜಾತಿಗೆ ನೀಡುವ ಚಿಂತನೆ ನಡೆಸಿದ್ದಾರೆ. ಆದರೂ ಆಕಾಂಕ್ಷಿಗಳ ಲಾಬಿ ಮಾತ್ರ ನಿಂತಿಲ್ಲ.
ಆದರೆ, ಕಾಂಗ್ರೆಸ್‍ನಲ್ಲಿ ಪರಿಸ್ಥಿತಿ ಅಷ್ಟು ಸುಲಭವಿಲ್ಲ. ಇರುವ ಆರು ಸ್ಥಾನಕ್ಕೆ 22ಮಂದಿ ಪ್ರಬಲ ಆಕಾಂಕ್ಷಿಗಳಿದ್ದು,ಇದರಲ್ಲಿ ಹಿರಿಯರೇ ಎಂಟು ಮಂದಿ ಇದ್ದಾರೆ. ಈ ವಿಚಾರವಾಗಿಯೇ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಳೆದ ಕೆಲ ದಿನಗಳಿಂದ ಎರಡು ಬಾರಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಂಪುಟ ವಿಸ್ತರಣೆ ಮಾಡಿದಲ್ಲಿ ಉದ್ಭವಿಸಬಹುದಾದ ಸನ್ನಿವೇಶದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕಾಗಿಯೇ ಡಿ.5ರಂದು ಸಮನ್ವಯ ಸಮಿತಿ ಸಭೆ ಕರೆದಿದ್ದಾರೆ.ಸಭೆಯಲ್ಲಿ ತೀರ್ಮಾನ ಕೈಗೊಂಡು ಡಿ.6 ಅಥವಾ 7 ರಂದು ದೆಹಲಿಗೆ ತೆರಳಲಿರುವ ಕಾಂಗ್ರೆಸ್ ನಾಯಕರು,ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಜೊತೆ ಸಮಾಲೋಚನೆ ನಡೆಸಲಿದ್ದಾರೆ.ಎಲ್ಲವೂ ಅಂದುಕೊಂಡಂತೆ ಆದರೆ ಡಿ. 8 ಅಥವಾ 9 ರಂದು ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ಗೆ ಅಲ್ಪಸಂಖ್ಯಾತ ಸಮುದಾಯದ ಮತಗಳು ಅಷ್ಟಾಗಿ ಸಿಗಲಿಲ್ಲ ಎಂಬ ವಿಚಾರ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಚಿಂತೆಗೀಡು ಮಾಡಿತ್ತು.ಅಲ್ಲದೆ, ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ದ ರಾಮನಗರಕ್ಷೇತ್ರದಲ್ಲೂ ಮುಸ್ಲಿಂ ಸಮುದಾಯದ ಮತಗಳು ಕೈ ಹಿಡಿದಿರಲಿಲ್ಲ. ಹೀಗಾಗಿ ಲೋಕಸಭಾ ಚುನಾವಣೆ ದೃಷ್ಟಿಯಿಂದ ಅಲ್ಪಸಂಖ್ಯಾತರಿಗೆ ಮಣೆ ಹಾಕಲು ಚಿಂತನೆ ನಡೆಸಿದ್ದು, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್‍ಗೆ ಮಂತ್ರಿ ಸ್ಥಾನ ಒಲಿಯುವ ಸಾಧ್ಯತೆಗಳಿವೆ.
ಬಿಎಸ್‍ಪಿಯಿಂದ ಆಯ್ಕೆಯಾಗಿದ್ದ ಎನ್.ಮಹೇಶ್ ರಾಜೀನಾಮೆಯಿಂದ ತೆರವಾದ ಮತ್ತೊಂದು ಸ್ಥಾನವು ಪರಿಶಿಷ್ಟ ಜಾತಿಗೆ ಸೇರಿದ ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿಗೆ ಸಿಗುವ ನಿರೀಕ್ಷೆ ಇದೆ.ಆದರೆ, ಹೆಚ್.ಡಿ.ರೇವಣ್ಣ ಇದಕ್ಕೆ ಒಪ್ಪುತ್ತಿಲ್ಲ. ಹೀಗಾಗಿ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.ಒಟ್ಟು ಐವರು ದಲಿತ ಶಾಸಕರು ಜೆಡಿಎಸ್‍ನಲ್ಲಿದ್ದಾರೆ. ದೇವೇಗೌಡರ ಕಣ್ಣು ಯಾರ ಮೇಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ