ಬೆಂಗಳೂರು:
ಕಿಯೋನಿಕ್ಸ್ ವೆಂಡರ್ಸ್‌ಗಳಿಗೆ ಈಗಾಗಲೇ ಬಾಕಿ ಹಣ ಪಾವತಿ ಮಾಡ್ತಿದ್ದೇವೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೇಳಿದರು.
ಕಿಯೋನಿಕ್ಸ್ ವೆಂಡರ್ಸ್ಗಳಿಗೆ ಬಾಕಿ ಪಾವತಿ ವಿಚಾರ ಮತ್ತು ಕಿಯೋನಿಕ್ಸ್ ವೆಂಡರ್ಸ್‌ನಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಿಯೋನಿಕ್ಸ್ ವೆಂಡರ್ಸ್ ಜೊತೆ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ನಾನು ಇಬ್ಬರು ಚರ್ಚೆ ಮಾಡಿದ್ದೇವೆ. ಎಲ್ಲರಿಗೂ ಪರಿಹಾರ ಕೊಡುವ ಕುರಿತು ಚರ್ಚೆಗಳನ್ನ ನಡೆಸಿದ್ದೇವೆ. ಕಳೆದ ಸರ್ಕಾರದಲ್ಲಿ ನಡೆದ ಹಗರಣಗಳನ್ನ ನಾವು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ವೆಂಡರ್ಸ್‌ಗಳಿಗೆ ಮತ್ತು ಸಣ್ಣ ಗುತ್ತಿಗೆದಾರಿಗೆ ತೊಂದರೆ ಕೊಡುವ ಉದ್ದೇಶ ನಮಗೆ ಇಲ್ಲ. ಆದರೆ ಸರ್ಕಾರದ ಖಜಾನೆಗೆ ಆಗಿರುವ ಖೋತಾ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ತನಿಖೆಯನ್ನ ಗಂಭೀರವಾಗಿ ಮಾಡ್ತಿದ್ದೇವೆ ಎಂದು ತಿಳಿಸಿದರು.
ಮಹೇಶ್ವರ್ ರಾವ್ ಅವರ ಸಮಿತಿ ತನಿಖೆ ಮಾಡ್ತಿದೆ. 2018 ರಿಂದ 2023ರವರೆಗೆ ನಡೆದ ಎಲ್ಲಾ ವ್ಯವಹಾರದ ಬಗ್ಗೆ ತನಿಖೆ ಮಾಡ್ತಿದೆ. ಪ್ರತಿ ಫೈಲ್ ಪರಿಶೀಲನೆ ಆಗ್ತಿದೆ. ಈಗಾಗಲೇ 1 ಸಾವಿರ ಫೈಲ್ ಪರಿಶೀಲನೆ ಆಗಿದೆ. 2-3 ಸಾವಿರ ಫೈಲ್ ಪರಿಶೀಲನೆ ಆಗಬೇಕಿದೆ. ಈ ವರದಿಯಲ್ಲಿ ಯಾರು ತಪ್ಪು ಮಾಡಿರುತ್ತಾರೋ ಎಲ್ಲರಿಗೂ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು.
ಈಗ ಮಾಡಿರುವ ತನಿಖೆಯಲ್ಲಿ ಅಕ್ರಮ ಆಗಿರುವ ಅಂಶ ಬೆಳಕಿಗೆ ಬಂದಿದೆ. 30% ನಿಂದ 300% ವರೆಗೂ ವ್ಯತ್ಯಾಸ ಆಗಿವೆ. 30%-40% ರಷ್ಟು ಹೆಚ್ಚಿನ ಹಣದಲ್ಲಿ ಖರೀದಿ ಆಗಿದೆ. ಇದೆಲ್ಲವನ್ನೂ ನೋಡಿದರೆ ಯಾವ ಅಧಾರದಲ್ಲಿ ಅವರಿಗೆ ಹಣ ಬಿಡುಗಡೆ ಮಾಡೋಣ? ಸಮಿತಿ ವರದಿ ಕೊಡುವವರೆಗೂ ನಾವು ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಹಣ ನಮ್ಮ ಬಳಿ ಇದೆ. ಬೇಕಿದ್ದರೆ ಆರ್‌ಟಿಐನಲ್ಲಿ ಅರ್ಜಿ ಹಾಕಿ ನೋಡಿ ಎಂದರು.
