ಭೋಪಾಲ್
ನರ್ಮದಾ ಮತ್ತು ಉಪನದಿಗಳ ಸಮೀಕ್ಷಾ ಮಾಡಲೆಂದು ರಚನೆಯಾದ ನರ್ಮದಾ ನದಿ ಟ್ರಸ್ಟ್ ಎಂಬ 17 ಸದಸ್ಯರ ತಂಡದ ನಾಯಕನನ್ನಾಗಿ ಮಾಡಿದ ನಂತರ ತನಗೆ ಹೆಲಿಕಾಪ್ಟರ್ ಅಗತ್ಯವಿದೆ ಎಂದು ಕಂಪ್ಯೂಟರ್ ಬಾಬಾ ಹೊಸ ಬೇಡಿಕೆಯಿಟ್ಟಿದ್ದಾರೆ.
ನರ್ಮದಾ ನದಿಯ ಸಮೀಕ್ಷೆ ನಡೆಸಲು ತನಗೆ ಹೆಲಿಕಾಪ್ಟರ್ ನ ಅವಶ್ಯಕತೆಯಿದೆ ಎಂದು ಮಧ್ಯಪ್ರದೇಶ ಸರ್ಕಾರಕ್ಕೆ ಬೇಡಿಕೆಯಿಟ್ಟಿದ್ದು , ಹಿಂದಿನ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ನರ್ಮದಾ ನದಿ ದಂಡೆಯಲ್ಲಿ ನೆಟ್ಟಿರುವ ಸಸಿಗಳ ಸ್ಥಿತಿಗತಿಗಳನ್ನು ಅರಿಯಲು ಹೆಲಿಕಾಪ್ಟರ್ ನಿಂದ ನೆರವಾಗಲಿದೆ ಅಲ್ಲದೆ ನರ್ಮದಾ ನದಿಯಿಂದ ಅವ್ಯಾಹತವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಕೇಳಿಬರುತ್ತಿರುವ ಆರೋಪಗಳಿಗೆ ಸಂಬಂಧಪಟ್ಟಂತೆ ಸತ್ಯ ತಿಳಿಯಲಿದೆ ಎಂದಿದ್ದಾರೆ.
ನರ್ಮದಾ,ಮಂದಾಕಿನಿ ಮತ್ತು ಕ್ಷಿಪ್ರ ನದಿಗಳ ರಕ್ಷಣೆಗೆ ನರ್ಮದಾ ಟ್ರಸ್ಟ್ ಹೋರಾಡುತ್ತಿದ್ದು ಅಲ್ಲಿ ಯಾವುದಾದರೂ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ಜನರು ದೂರು ಸಲ್ಲಿಸಲು ಮಾ ನರ್ಮದಾ ಎಂಬ ಸಹಾಯವಾಣಿಯನ್ನು ತೆರೆಯಲಾಗಿದೆ ಅದರಡಿ ನೀಡಲಾಗಿರುವ ಟೋಲ್ ಫ್ರೀ ಸಂಖ್ಯೆಗೆ ದೂರು ಸಲ್ಲಿಸಬಹುದಾಗಿದೆ ಎಂದು ಕಂಪ್ಯೂಟರ್ ಬಾಬಾ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಲವು ಧಾರ್ಮಿಕ ಮತ್ತು ಪರಿಸರ ಸಂಬಂಧಿ ವಿಷಯಗಳಿಗೆ ಹೋರಾಟ ನಡೆಸಲು ಹಿಂದಿನ ಶಿವರಾದ್ ಸಿಂಗ್ ಚೌಹಾಣ್ ಸರ್ಕಾರ ಕಳೆದ ವರ್ಷ ಏಪ್ರಿಲ್ ನಲ್ಲಿ ಕಂಪ್ಯೂಟರ್ ಬಾಬಾ ಸೇರಿದಂತೆ ಐವರು ಧಾರ್ಮಿಕ ಮುಖಂಡರಿಗೆ ರಾಜ್ಯ ಸಚಿವ ಹುದ್ದೆಯ ಸ್ಥಾನಮಾನ ನೀಡಿ ನೇಮಿಸಿತ್ತು. ಆದರೆ ಐದು ತಿಂಗಳು ಕಳೆದ ನಂತರ ಕಂಪ್ಯೂಟರ್ ಬಾಬಾ ಟ್ರಸ್ಟ್ ನಿಂದ ಹೊರಬಂದಿದ್ದರು. ನರ್ಮದಾ ನದಿ ನೀರಿನ ರಕ್ಷಣೆ ಹೆಸರಿನಲ್ಲಿ ಶಿವರಾಜ್ ಸಿಂಗ್ ಚೌಹಾಣ್ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.