ದೊಡ್ಡಬಳ್ಳಾಪುರ:

ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ಮೋಜು-ಮಸ್ತಿಗೆಂದು ಬೈಕ್ನಲ್ಲಿ ಹೋಗಿದ್ದ 8 ಮಂದಿ ಪೈಕಿ ಮೂವರು ಯುವಕರು ನೀರುಪಾಲಾಗಿರುವ ದುರ್ಘಟನೆ ಗೌರಿಬಿದನೂರು-ದೊಡ್ಡಬಳ್ಳಾಪುರ ರಸ್ತೆಯ ತಿಪ್ಪಗಾನಹಳ್ಳಿ ಕೆರೆಯಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರಿನ ರಾಮಮೂರ್ತಿ ನಗರದ ನಿವಾಸಿಗಳಾದ ರಾಜು(19), ಚಂದ್ರು (20), ನವೀನ್ (24) ಗುರುತಿಸಲಾಗಿದೆ. ನವೀನ್ ಎಂಬುವವರ ಹುಟ್ಟುಹಬ್ಬದ ನಿಮಿತ್ತ ತಾಲ್ಲೂಕಿನ ಘಾಟಿ ದೇವಾಲಯಕ್ಕೆ 4 ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ನಾಲ್ವರು ಯುವಕರು, ಯುವತಿಯರು ಘಾಟಿ ಸುಬ್ರಹ್ಮಣ್ಯಕ್ಕೆ ಬಂದು ನಂತರ ಕೆರೆಯಲ್ಲಿ ಈಜುತ್ತಿದ್ದರು.

ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಓರ್ವನನ್ನು ರಕ್ಷಿಸಲು ಹೋಗಿ ಮತ್ತಿಬ್ಬರು ನೀರುಪಾಲಾಗಿದ್ದಾರೆ ಎನ್ನಲಾಗಿದೆ. ತಮ್ಮ ಕಣ್ಣೆದುರಲ್ಲೇ ಸ್ನೇಹಿತರು ನೀರುಪಾಲಾಗುತ್ತಿದ್ದರೂ ಉಳಿಸಿಕೊಳ್ಳಲು ಆಗದ ಐವರು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಮೃತ ದೇಹಗಳ ಶೋಧ ಕಾರ್ಯ ನಡೆಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








