ತುಮಕೂರು : ವಿವಿಧೆಡೆ ಕಳವು ಮಾಡಿದ್ದ 9.5 ಲಕ್ಷ ರೂ.ಬಂಗಾರ ವಶ!!

ತುಮಕೂರು:

      ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದ ಏಳು ಜನ ಕುಖ್ಯಾತ ಕಳ್ಳರನ್ನು ಪೊಲೀಸರು ಬಂಧಿಸಿ ಅವರು ಕಳವು ಮಾಡಿದ್ದ 9.5 ಲಕ್ಷ ರೂ ಬೆಲೆ ಬಾಳುವ ಸುಮಾರು 315 ಗ್ರಾಂ ತೂಕದ ಬಂಗಾರದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ಕಳ್ಳರನ್ನು ಪತ್ತೆ ಮಾಡಿ, ಕಳವು ಮಾಲು ವಶಪಡಿಸಿಕೊಳ್ಳಲು ಶ್ರಮಿಸಿದ ಪೊಲೀಸ್ ತಂಡವನ್ನು ಅಭಿನಂದಿಸಿದರು.

      ನಗರದ ಹೊರವಲಯದ ಗಂಗಸಂದ್ರ ರಸ್ತೆಯಲ್ಲಿ ದರೋಡೆ ಮಾಡಲು ಸಂಚು ರೂಪಿಸಿ ಹೊಂಚು ಹಾಕುತ್ತಿದ್ದ ಆರೋಪಿಗಳನ್ನು ತಿಲಕ್ ಪಾರ್ಕ್ ಠಾಣಾ ಪ್ರಕರಣ ಸಂಬಂಧ ಪೊಲೀಸರು ದಸ್ತಗಿರಿಮಾಡಿ, ವಿಚಾರಣೆಗೊಳಪಡಿಸಿದಾಗ ನಗರದಲ್ಲಿ ಇತ್ತೀಚೆಗೆ ದಾಖಲಾದ ಸರಣಿ ಸರಗಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದರು ಎಂದರು.

     ನಗರದ ಪಿ ಹೆಚ್ ಕಾಲೋನಿಯ ಷಫಿ ಅಹಮದ್(28), ಯಲಹಂಕದ ತೌಫಿಕ್ ಅಹಮದ್(24), ಬೆಂಗಳೂರು ಕೆ ಜಿ ಹಳ್ಳಿಯ ಫೈಸಲ್ ಅಹಮದ್(19), ಸಲ್ಮಾನ್ ಖಾನ್(20), ರಹೀಂ(21), ರಾಮನಗರದ ಮನ್ನನ್(22) ಹಾಗೂ ಬೆಂಗಳೂರು ವಿಜಿನಾಪುರದ ಹನೀಫ್(26) ಎಂಬುವವರನ್ನ ಪೊಲೀಸರು ಬಂಧಿಸಿ, ನಗರದ ವಿವಿಧ ಕಡೆ ಕಳವು ಮಾಡಿದ್ದ 9 ಪ್ರಕರಣಗಳ ಬಂಗಾರದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 5 ದ್ವಿಚಕ್ರ ವಾಹಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹೇಳಿದರು.

      ನಗರ ಡಿವೈಎಸ್ಪಿ ತಿಪ್ಪೇಸ್ವಾಮಿಯವರ ನೇತೃತ್ವದಲ್ಲಿ ತಿಲಕ್ ಪಾರ್ಕ್ ವೃತ್ತದ ಸರ್ಕಲ್ ಇನ್ಸ್‍ಪೆಕ್ಟರ್ ಟಿ.ಎಸ್.ರಾಧಾಕೃಷ್ಣ, ಪಿಎಸ್‍ಐ ಎಂ ಬಿ ಲಕ್ಷ್ಮಯ್ಯ, ಜಯನಗರ ಠಾಣೆ ಪಿಎಸ್‍ಐ ಹೆಚ್ ಎಸ್ ನವೀನ್, ಎಎಸ್‍ಐ ಕೃಷ್ಣಮೂರ್ತಿ, ಭಾಷಾಮೊಹಿದ್ದೀನ್, ಮುನಾವರ್‍ಪಾಷಾ, ಪಿ ಶಾಂತರಾಜು, ಸೈಮನ್ ವಿಕ್ಟರ್, ಈರಣ್ಣ, ಸತ್ಯನಾರಾಯಣ, ಮಂಜುನಾಥ್, ರೇಣುಕಾಪ್ರಸನ್ನ, ನರಸಿಂಹಮೂರ್ತಿ, ಮಂಜುನಾಥ್, ಎಸ್ಪಿ ಕಛೇರಿಯ ನರಸಿಂಹರಾಜು, ರಮೇಶ್ ಅವರು ಈ ಪ್ರಕರಣಗಳ ಪತ್ತೆಗೆ ಶ್ರಮಿಸಿದ್ದು ಎಸ್ಪಿ ಅಭಿನಂದಿಸಿದರು.

      9 ಸರಗಳ್ಳ ಪ್ರಕರಣಗಳಲ್ಲಿ ಸರ ಕಳೆದುಕೊಂಡಿದ್ದ ನಗರದ ಅಮರಜ್ಯೋತಿ ನಗರದ ಸುಜಾತ ಹಾಗೂ ಮಾರುತಿ ನಗರದ ಕಲ್ಪನ ಅವರಿಗೆ ಎಸ್ಪಿ ಡಾ. ವಂಶಿಕೃಷ್ಣ ವಶಪಡಿಸಿಕೊಂಡ ಅವರ ಸರಗಳನ್ನು ವಿತರಿಸಿದರು.

      ಒಂದೂವರೆ ತಿಂಗಳ ಹಿಂದೆ ಸುಜಾತ ಅವರು ತಿಲಕ್ ಪಾರ್ಕ್ ಠಾಣಿ ವ್ಯಾಪ್ತಿಯಲ್ಲಿ ದ್ವಿಚಕ್ರದಲ್ಲಿ ಹೋಗುತ್ತಿದ್ದಾಗ ಅಪರಿಚಿತರಿಬ್ಬರು ಬಂದು ಸರ ಕಿತ್ತುಕೊಂಡು ಹೋಗಿದ್ದರು. ಮತ್ತೊಂದು ಪ್ರಕರಣದಲ್ಲಿ ಮಾರುತಿ ನಗರದ ಕಲ್ಪನ ಅವರು ಉಪ್ಪಾರಹಳ್ಳಿ ಫ್ಲೈ ಓವರ್ ಮೇಲೆ ನಡೆದು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸರ ಕಸಿದು ಪರಾರಿಯಾಗಿದ್ದರು.

      ಸರಗಳ್ಳತನದ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಮಾಡಲಾಗುತ್ತಿದೆ. ಸೂಚನಾ ಫಲಕ ಅಳವಡಿಸಿ, ಕರಪತ್ರ ವಿತರಿಸಿ ಮುನ್ನೆಚ್ಚರಿಕೆ ವಹಿಸಲು ಜಾಗೃತಿ ಮುಡಿಸಲಾಗುತ್ತಿದೆ. ಜನ ಜಾಗೃತಿಗಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಿರು ಚಿತ್ರ ನಿರ್ಮಾಣ ಮಾಡಲಾಗುತ್ತಿದೆ ಎಂದರು.

      ಗ್ರಾಮಾಂತರ ಕ್ಷೇತ್ರದ ಕಳವು ಪ್ರಕರಣಗಳ ತನಿಖೆಗೆ ಎಎಸ್ಪಿ ಹಾಗೂ ಡಿವೈಎಸ್ಪಿ ನೇತೃತ್ವದ ತಂಡ ರಚಿಸಲಾಗಿದೆ. ಪ್ರತಿಯೊಂದು ಪ್ರಕರಣಗಳ ಮಾಹಿತಿ ಪಡೆಯಲು ಸೂಚಿಸಲಾಗಿದೆ, ಇದರಲ್ಲಿ ಪೊಲೀಸರ ತಪ್ಪಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

      ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಳವು ಪ್ರಕರಣ ಹೆಚ್ಚುತ್ತಿದ್ದು ಪೊಲೀಸರು ತಡೆಯುವ ಪ್ರಯತ್ನ ಮಾಡುತ್ತಿಲ್ಲ ಎಂದು ಮಾಜಿ ಶಾಸಕ ಸುರೇಶ್‍ಗೌಡರು ಆರೋಪ ಮಾಡಿ, ಹೆಬ್ಬೂರು ಠಾಣೆ ಪೊಲೀಸರ ವಿರುದ್ಧ ಕ್ರಮಕ್ಕೆ ಎಸ್ಪಿಗೆ ಮನವಿ ಮಾಡಿದ್ದರು. ಈ ಕಳವು ಪ್ರಕರಣ ರಾಜಕೀಯಕರಣಗೊಂಡು ಕ್ಷೇತ್ರದ ಹಾಲಿ ಶಾಸಕ ಗೌರಿಶಂಕರ್ ಹಾಗೂ ಸುರೇಶ್ ಗೌಡರ ನಡುವಿನ ರಾಜಕೀಯ ವಿವಾದಕ್ಕೆ ಕಾರಣವಾಗಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap