ನವದೆಹಲಿ:
ಲೋಕಸಭೆ ಚುನಾವಣೆ ಫಲಿತಾಂಶದ ಅವಲೋಕನ ಮತ್ತು ಸರಕಾರ ರಚನೆಯ ವಿವರಗಳ ಕುರಿತು ಚರ್ಚಿಸಲು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಹಿರಿಯ ನಾಯಕರು ಇಂದು ಬುಧವಾರ ಸಂಜೆ ದೆಹಲಿಯಲ್ಲಿ ಸಭೆ ಸೇರಲಿದ್ದಾರೆ.
ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆಂಧ್ರಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಲಿರುವ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಉನ್ನತ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇಶದ ಪ್ರಧಾನಿ ಹುದ್ದೆಯ ಚುಕ್ಕಾಣಿ ಹಿಡಿಯಲು ದಾಖಲೆಯ ಮೂರನೇ ಅವಧಿಗೆ ಸಜ್ಜಾಗಿರುವ ನರೇಂದ್ರ ಮೋದಿಯವರನ್ನು ಅವರನ್ನು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ನಾಯಕರು ಅಭಿನಂದಿಸಲಿದ್ದಾರೆ. ಎಲ್ಲಾ ನೂತನ ನಾಯಕರೊಂದಿಗೆ ನರೇಂದ್ರ ಮೋದಿಯವರು ಹೊಸ ಸರ್ಕಾರದ ವಿವರಗಳನ್ನು ಚರ್ಚಿಸುವ ನಿರೀಕ್ಷೆಯಿದೆ, ಬಿಜೆಪಿಯ ಮಿತ್ರಪಕ್ಷಗಳು ಈ ಬಾರಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ ಬಹುಮತದ 272 ಕ್ಕಿಂತ ಹೆಚ್ಚು ಸರಳ ಬಹುಮತವನ್ನು ಹೊಂದಿದ್ದರೂ ಕೂಡ, ಸತತ ಅಧಿಕಾರದಲ್ಲಿರುವ ಬಿಜೆಪಿ ಸ್ವಂತವಾಗಿ 2014 ರಿಂದ ಮೊದಲ ಬಾರಿಗೆ ಮ್ಯಾಜಿಕ್ ಸಂಖ್ಯೆಯಿಂದ ಹಿಂದೆ ಬಿದ್ದಿದೆ. ಸರ್ಕಾರ ರಚನೆಗೆ ತನ್ನ ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗಬೇಕಾದ ಅನಿವಾರ್ಯತೆಯಿದೆ.
2019 ರಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಬಿಜೆಪಿಗೆ 63 ಸ್ಥಾನಗಳು ಕಡಿಮೆಯಾಗಿದ್ದು 240ಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಬಾರಿ ಟಿಡಿಪಿ, ಜೆಡಿಯು, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ (ರಾಮ್ ವಿಲಾಸ್) ಕ್ರಮವಾಗಿ 16, 12, 7 ಮತ್ತು 5 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.
ದೇಶದ ಜನಾದೇಶ ಹೊರಬಿದ್ದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಲು ಕೇಂದ್ರ ಸಚಿವ ಸಂಪುಟ ಇಂದು ಬೆಳಗ್ಗೆ ಸಭೆ ಸೇರಲಿದೆ. ಮುಂದಿನ ಪ್ರಮಾಣ ವಚನಕ್ಕೆ ಸಿದ್ಧತೆ ನಡೆಸಿರುವ ಅವರು ಇಂದು ಸರ್ಕಾರ ವಿಸರ್ಜನೆ ಮಾಡುವ ನಿರೀಕ್ಷೆ ಇದೆ.
ನಿನ್ನೆ ಚುನಾವಣಾ ಫಲಿತಾಂಶಗಳು ಹೊರಬಂದ ನಂತರ ಮಾತನಾಡಿದ್ದ ಪ್ರಧಾನಿ ಮೋದಿ, ಎನ್‌ಡಿಎ ಮುಂದಿನ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದ್ದರು.
ಈ ಮಧ್ಯೆ, ಇಂಡಿಯಾ ಬ್ಲಾಕ್ ನಾಯಕರು ತಮ್ಮ ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇಂದು ಸಂಜೆ ಸಭೆ ನಡೆಸಲಿದ್ದಾರೆ. ಕಾಂಗ್ರೆಸ್ ನಾಯಕರು ಈಗಾಗಲೇ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಇಬ್ಬರನ್ನೂ ಸಂಪರ್ಕಿಸಿದ್ದರೂ, ಸರ್ಕಾರ ರಚನೆಗೆ ಪ್ರಯತ್ನಿಸಲು ಅವರನ್ನು ಮನವೊಲಿಸುವ ಕೆಲಸ ಮಾಡುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.
ದೆಹಲಿಯ 10, ರಾಜಾಜಿ ಮಾರ್ಗದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಂಜೆ 6 ಗಂಟೆಗೆ ಸಭೆ ನಡೆಯಲಿದ್ದು, ಲೋಕಸಭೆ ಚುನಾವಣೆ ಫಲಿತಾಂಶ ಮತ್ತು ಸರ್ಕಾರ ರಚನೆಯತ್ತ ಸಾಗಲು ಜೆಡಿಯು ಮತ್ತು ಟಿಡಿಪಿಯನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಕುರಿತು ಚರ್ಚೆ ನಡೆಯಲಿದೆ.
ಶರದ್ ಪವಾರ್, ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್, ಚಂಪೈ ಸೊರೆನ್, ಉದ್ಧವ್ ಠಾಕ್ರೆ, ಅಖಿಲೇಶ್ ಯಾದವ್, ಸೀತಾರಾಂ ಯೆಚೂರಿ, ಡಿ ರಾಜಾ ಮತ್ತು ಇತರರು ಸೇರಿದಂತೆ ಪ್ರತಿಪಕ್ಷ ನಾಯಕರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ, ಜೊತೆಗೆ ಕಾಂಗ್ರೆಸ್ ಉನ್ನತ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಭಾಗವಹಿಸಲಿದ್ದಾರೆ.
ಆದರೆ, ಈಗಾಗಲೇ ಬಿಜೆಪಿ ನಾಯಕರ ಜತೆ ಮಾತುಕತೆಗಾಗಿ ದೆಹಲಿಗೆ ಆಗಮಿಸಿರುವ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಇಬ್ಬರೂ ವಿಪಕ್ಷಗಳ ಮೈತ್ರಿಕೂಟಕ್ಕೆ ಪಕ್ಷಾಂತರ ಮಾಡುವ ಸಾಧ್ಯತೆ ತಳ್ಳಿ ಹಾಕಿದ್ದಾರೆ. ಆದರೂ, ಇಂಡಿಯಾ ಬ್ಲಾಕ್ ಸರ್ಕಾರ ರಚನೆಯ ಸಾಧ್ಯತೆಯನ್ನು ಹುಡುಕುತ್ತಿದೆ.