ತುಮಕೂರು:
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯುತ್ತಿದ್ದಂತೆಯೇ ತುಮಕೂರಿನಲ್ಲಿಯೂ ಮಹಾ ನಗರ ಪಾಲಿಕೆಯಲ್ಲಿ ಚುನಾವಣಾ ರಾಜಕೀಯ ಗರಿಗೆದರಿವೆ.
ಮೈಸೂರಿನಲ್ಲಿ ಮೈತ್ರಿ ಮುಂದುವರಿದಂತೆ ಇದೇ ರೀತಿಯ ಚಟುವಟಿಕೆಗಳು ಇಲ್ಲಿಯೂ ನಡೆಯುವ ಅವಕಾಶಗಳೇ ಹೆಚ್ಚಿವೆ. ಈ ಬಾರಿ ತುಮಕೂರು ಮಹಾನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಕಾಂಗ್ರೆಸ್ ಅಥವಾ ಜೆ.ಡಿ.ಎಸ್. ಈ ಎರಡು ಪಕ್ಷಗಳಲ್ಲಿ ಯಾವುದಾದರೂ ಒಂದು ಪಕ್ಷ ಹಿಡಿಯಲೇಬೇಕು. ಆದರೆ ಇವೆರಡರಲ್ಲಿ ಯಾವ ಪಕ್ಷ ಹಿಡಿತ ಸಾಧಿಸಲಿದೆ ಎಂಬ ಚರ್ಚೆಗಳು ನಡೆದಿವೆ. ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಜೆಡಿಎಸ್ ಅಧಿಕಾರ ಹಿಡಿಯುವ ಸಾಧ್ಯತೆಗಳು ಹೆಚ್ಚು ಎನ್ನುತ್ತವೆ ಅಲ್ಲಿನ ರಾಜಕೀಯ ಮೂಲಗಳು. ಜೆಡಿಎಸ್‍ಗೆ ಮೇಯರ್ ಪಟ್ಟ ಒಲಿದರೆ ಕಾಂಗ್ರೆಸ್‍ಗೆ ಉಪ ಮೇಯರ್ ಸ್ಥಾನ ಒಲಿಯುವ ಸಾಧ್ಯತೆಗಳ ಬಗ್ಗೆ ಪಾಲಿಕೆ ಹಂತದ ರಾಜಕೀಯದಲ್ಲಿ ಕೇಳಿಬರುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಈಗಷ್ಟೇ ಮೈಸೂರಿನ ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಜೆಡಿಎಸ್ ಪಕ್ಷವು ಕಾಂಗ್ರೆಸ್‍ಗೆ ಬಿಟ್ಟು ಕೊಟ್ಟು ಮೈತ್ರಿಯನ್ನು ಮುಂದುವರಿಸಿದೆ. ಅಲ್ಲಿ ಮಾಜಿ ಸಿ.ಎಂ. ಸಿದ್ದರಾಮಯ್ಯ ಅವರು ತನ್ನ ಹಿಡಿತ ಸಾಧಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತುಮಕೂರಿನಲ್ಲೂ ಇವೆರಡು ಪಕ್ಷಗಳ ಮೈತ್ರಿ ಅಬಾಧಿತ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತಿದೆ.
ಹಾಗೆ ನೋಡಿದರೆ ತುಮಕೂರು ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಹೊಸತೇನಲ್ಲ. ಕಳೆದ ಮಹಾನಗರ ಪಾಲಿಕೆಯಲ್ಲೇ ಈ ಪ್ರಯೋಗ ಯಶಸ್ವಿಯಾಗಿದೆ. ಎರಡೂ ಪಕ್ಷಗಳು ಅಧಿಕಾರವನ್ನು ಹಂಚಿಕೊಂಡಿವೆ. ಆದರೆ ಈಗ ಮೈತ್ರಿಗಿಂತ “ಈ ಬಾರಿ ಮೊದಲಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವವರು ಯಾರು?” ಎಂಬುದಷ್ಟೇ ಆರಂಭದಿಂದಲೂ ಕುತೂಹಲದ ಪ್ರಶ್ನೆಯಾಗಿ ಚರ್ಚೆಗೊಳ್ಳುತ್ತಿದೆ.
ಇದೇ ಮೊದಲ ಬಾರಿಗೆ ತುಮಕೂರು ಮಹಾನಗರ ಪಾಲಿಕೆಗೆ ಕಳೆದ ಆಗಸ್ಟ್ 31 ರಂದು ಚುನಾವಣೆ ನಡೆದಿತ್ತು. ಸೆಪ್ಟೆಂಬರ್ 3 ರಂದು ಫಲಿತಾಂಶ ಪ್ರಕಟವಾಗಿತ್ತು. 35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಯು 12 ಸದಸ್ಯಬಲ ಹೊಂದಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ 10 ಮತ್ತು ಜೆಡಿಎಸ್ 10 ಸ್ಥಾನಗಳನ್ನು ಸಮ-ಸಮವಾಗಿ ಪಡೆದುಕೊಂಡರೆ, ಮೂವರು ಪಕ್ಷೇತರರು ಗೆದ್ದರು. ಈ ಫಲಿತಾಂಶವೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಅನಿವಾರ್ಯತೆಯನ್ನು ಖಚಿತಗೊಳಿಸಿತ್ತು. ಇದರ ನಡುವೆ ತಾನೇ ಅಧಿಕಾರ ಹಿಡಿಯುವುದಾಗಿ ಬಿಜೆಪಿ ಹೇಳಿ ಎಲ್ಲರಲ್ಲೂ ಕುತೂಹಲ ಕೆರಳಿಸಿತು. ಆದರೆ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಬಗ್ಗೆ ಯಾವುದೇ ಪ್ರಕ್ರಿಯೆಗಳು ಜರುಗದ ಕಾರಣ, ಈ ವಿಷಯ ನಿಧಾನವಾಗಿ ಹಿನ್ನೆಲೆಗೆ ಸರಿಯತೊಡಗಿತು. ಆದರೆ ಇದೀಗ ಮೈಸೂರು ಮಹಾನಗರ ಪಾಲಿಕೆಯ ವಿದ್ಯಮಾನಗಳಿಂದಾಗಿ ತುಮಕೂರು ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬರತೊಡಗಿದೆ. ಈ ಮಧ್ಯೆ ಜೆಡಿಎಸ್ ಸದಸ್ಯ-ಮಾಜಿ ಮೇಯರ್ ಎಚ್.ರವಿಕುಮಾರ್ ಅವರ ನಿಧನದಿಂದಾಗಿ ಜೆಡಿಎಸ್‍ನ ಸ್ಥಾನಗಳ ಸಂಖ್ಯೆಯು 9 ಕ್ಕೆ ಕುಸಿದಿದೆ.
ತುಮಕೂರು ಪಾಲಿಕೆಯ ಮೇಯರ್ ಸ್ಥಾನವು ಹಿಂದುಳಿದ ವರ್ಗ(ಎ) -ಮಹಿಳೆಗೆ ಮೀಸಲಾಗಿದೆ. ಉಪಮೇಯರ್ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಅಂದರೆ ಪಾಲಿಕೆಯ ಆಡಳಿತವು ಸಂಪೂರ್ಣ ಮಹಿಳೆಯರ ಪಾಲಾಗಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಎಂಬುದು ಮೊದಲೇ ಸಾಂದರ್ಭಿಕವಾಗಿ ಖಚಿತವಾಗಿತ್ತಾದರೂ, ಯಾವ ಪಕ್ಷಕ್ಕೆ ಮೇಯರ್ ಸ್ಥಾನ ದಕ್ಕೀತು ಎಂಬುದು ನಿಶ್ಚಿತವಾಗಿರಲಿಲ್ಲ. ಅದು ಬಹುಮುಖವಾಗಿ, ವಿವಿಧ ಹಂತಗಳಲ್ಲಿ ಚರ್ಚೆಗೆ ಒಳಗಾಗುತ್ತಲೇ ಇತ್ತು. ಆದರೆ ಈ ಮೀಸಲಾತಿ ಪ್ರಕಟಗೊಂಡ ಬಳಿಕ ಒಂದು ಹಂತದಲ್ಲಿ “ಈ ಬಾರಿ ಮೇಯರ್ ಪಟ್ಟ ಜೆಡಿಎಸ್‍ಗೆ’ ಎಂಬುದು ಗೋಚರಿಸತೊಡಗಿತು.
ಲಲಿತಾ ರವೀಶ್‍ಗೆ ಅದೃಷ್ಟ ?
ಮೇಯರ್ ಸ್ಥಾನಕ್ಕೆ ಮೀಸಲಾತಿ ಅನ್ವಯ ತಿಗಳ ಸಮುದಾಯದವರು, ಮುಸ್ಲಿಂ ಸಮುದಾಯದವರು ಹಾಗೂ ಇನ್ನಿತರ ಸಮುದಾಯದವರು ಅರ್ಹರಾಗಿರುತ್ತಾರೆ. ಅದರಂತೆ ಜೆ.ಡಿ.ಎಸ್.ನಲ್ಲಿ ಮೊದಲನೆಯದಾಗಿ ಹಾಗೂ ಪ್ರಬಲವಾಗಿ ಕೇಳಿಬರುತ್ತಿರುವ ಹೆಸರೆಂದರೆ ನಗರದ 21 ನೇ ವಾರ್ಡ್ (ಕುವೆಂಪು ನಗರ)ನಿಂದ ವಿಜೇತರಾಗಿರುವ ಮಾಜಿ ಮೇಯರ್ ಲಲಿತಾ ರವೀಶ್‍ರವರು. ಇವರನ್ನು ಬಿಟ್ಟರೆ ಜೆಡಿಎಸ್‍ನಿಂದ ಗೆದ್ದಿರುವ ಏಕೈಕ ಮುಸ್ಲಿಂ ಅಭ್ಯರ್ಥಿ ಎನಿಸಿರುವ ನಾಜಿಮಾಬಿ (29 ನೇ ವಾರ್ಡ್ -ಮರಳೂರು ದಿಣ್ಣೆ) ಅವರು ಸಹ ತೀವ್ರ ಲಾಬಿ ನಡೆಸುತ್ತಿದ್ದಾರೆ. “ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ಮೇಯರ್ ಸ್ಥಾನ ಕೊಡಬೇಕು” ಎಂಬುದು ಅವರ ಬೇಡಿಕೆಯಾಗಿದೆ. ಇವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರ ಬಳಿಗೂ ತೆರಳಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಆದರೆ ಇವರಿಬ್ಬರಲ್ಲಿ ಲಲಿತಾ ರವೀಶ್ ಅವರಿಗೇ ಅದೃಷ್ಟ ಒಲಿಯಲಿದೆಯೆಂಬುದು ಸ್ಥಳೀಯ ರಾಜಕೀಯವನ್ನು ಬಲ್ಲ ಬಹುತೇಕ ಜನರ ಸರಳ ಲೆಕ್ಕಾಚಾರ. ಈ ವಿಷಯದಲ್ಲಿ ತುಮಕೂರು ಪಾಲಿಕೆಯ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿರುವ ಗುಬ್ಬಿ ಶಾಸಕರೂ ಆದ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಕೈಗೊಳ್ಳುವ ನಿಲುವೇ ಅಂತಿಮ ಎಂಬುದು ಕೆಲವರಿಂದ ಕೇಳಿಬರುತ್ತಿರುವ ಮಾತು. ಸಚಿವ ಶ್ರೀನಿವಾಸ್ ಅವರು ಲಲಿತಾರವೀಶ್ ಅವರನ್ನು ಹೆಸರಿಸುವ ಬಗ್ಗೆ ಒಲವು ಹೊಂದಿದ್ದಾರೆಂಬುದು ಜೆಡಿಎಸ್‍ನಲ್ಲಿ ಪ್ರಬಲವಾಗಿ ವ್ಯಕ್ತವಾಗುತ್ತಿರುವ ಭಾವನೆ.
ಉಪಮೇಯರ್ ಯಾರು?
ಇನ್ನು ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಈ ಮೀಸಲಾತಿ ಪ್ರಕಾರ ಜೆಡಿಎಸ್‍ನಲ್ಲಿ ಯಾವ ಅಭ್ಯರ್ಥಿಯೂ ಇಲ್ಲ. ಕಾಂಗ್ರೆಸ್‍ನಲ್ಲಿ ಮೇಯರ್ ಮತ್ತು ಉಪಮೇಯರ್ ಎರಡೂ ಸ್ಥಾನಗಳಿಗೆ ಮೀಸಲಾತಿ ಪ್ರಕಾರ ಅರ್ಹರಿದ್ದಾರಾದರೂ, ಎರಡನ್ನೂ ಪಡೆಯಲು ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಉಪಮೇಯರ್ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಕಾಂಗ್ರೆಸ್‍ನಲ್ಲಿ 9 ನೇ ವಾರ್ಡ್ (ವೀರಸಾಗರ)ನಿಂದ ಗೆದ್ದಿರುವ ಪ್ರಭಾವತಿ ಸುಧೀಶ್ವರ್ ಮತ್ತು 19 ನೇ ವಾರ್ಡ್ (ಕೋತಿತೋಪು) ನಿಂದ ಗೆದ್ದಿರುವ ಬಿ.ಎಸ್.ರೂಪಶ್ರೀ ಅವರು ಅರ್ಹರಿದ್ದು, ಇವರಿಬ್ಬರಲ್ಲಿ ಪೈಪೋಟಿ ಏರ್ಪಟ್ಟಿದೆ. ಪ್ರಭಾವತಿ ಅವರು ಮಾಜಿ ಮೇಯರ್ ಸುಧೀಶ್ವರ್ ಅವರ ಪತ್ನಿಯಾಗಿದ್ದು, ಇವರಿಗೆ ಅದೃಷ್ಟ ಒಲಿದೀತೇ? ಅಥವಾ ರೂಪಶ್ರೀ ಅವರಿಗೆ ಅದೃಷ್ಟ ಲಭಿಸೀತೇ? ಎಂಬುದೀಗ ಚರ್ಚೆಗೊಳ್ಳುತ್ತಿದೆ. ಇದೇ ವಿಷಯದಲ್ಲಿ ಲಾಬಿಯೂ ನಡೆಯುತ್ತಿದೆ.
ಮತ್ತೊಂದು ಮೂಲದ ಪ್ರಕಾರ, ಕಾಂಗ್ರೆಸ್‍ನ ಬಹುತೇಕ ಸದಸ್ಯರು ಸಹ “ಜೆಡಿಎಸ್‍ನಿಂದ ಲಲಿತಾ ರವೀಶ್ ಅವರೇ ಮೇಯರ್ ಆಗಲಿ” ಎಂಬ ಆಶಯ ಹೊಂದಿದ್ದಾರೆಂಬುದು ಪಾಲಿಕೆಯ ರಾಜಕೀಯದಲ್ಲಿ ಭಾರಿ ಕೌತುಕ ಮೂಡಿಸಿದೆ. ಒಂದು ವೇಳೆ ಜೆಡಿಎಸ್‍ನಿಂದ ಲಲಿತಾ ರವೀಶ್ ಅವರ ಬದಲು ಬೇರೆಯವರ ಹೆಸರನ್ನು ಮುಂದಿಟ್ಟರೆ, ಕಾಂಗ್ರೆಸ್ ಸದಸ್ಯರ ಒಂದು ಗುಂಪು ಅದನ್ನು ವಿರೋಧಿಸಿ ಬಿಜೆಪಿಯ ಕಡೆ ವಾಲುತ್ತದೆಂಬ ಹಾಗೂ ಆಮೂಲಕ ಬಿಜೆಪಿ ಬೆಂಬಲ ಪಡೆದುಕೊಂಡು ಮೇಯರ್ ಸ್ಥಾನವನ್ನು ಪಡೆದುಕೊಳ್ಳುತ್ತದೆಂಬ ಒಳರಾಜಕೀಯ ಬೆಳವಣಿಗೆಗಳೂ ನಡೆಯುವ ಸಂಭವ ಇದೆಯೆಂಬುದು ಕದನ ಕುತೂಹಲ ಉಂಟು ಮಾಡಿದೆ. ಈಗ ಎಲ್ಲರೂ ತುಮಕೂರು ಪಾಲಿಕೆಯಲ್ಲಿ ಮೇಯರ್ -ಉಪಮೇಯರ್ “ಚುನಾವಣಾ ವೇಳಾಪಟ್ಟಿ” ಹಾಕುವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಆ ಬಳಿಕ ರಾಜಕೀಯವು ರಂಗೇರಲಿದೆ.
ಈ ಹಿಂದಿನ ಅಧ್ಯಕ್ಷ-ಉಪಾಧ್ಯಕ್ಷರ, ಮೇಯರ್ ಚುನಾವಣೆಗಳನ್ನು ಗಮನಿಸಿದರೆ ಆಮಿಷದ ವಾಸನೆಗಳು ಕೇಳಿಬರುತ್ತಿದ್ದವು. ಈ ಬಾರಿ ಅಂತಹ ವಾಸನೆ ಇಲ್ಲವಾದರೂ ಆಮಿಷಗಳಿಂದ ಈ ಚುನಾವಣೆ ಸಂಪೂರ್ಣ ಮುಕ್ತವಾಗಲಿದೆಯೇ ಎಂಬುದನ್ನು ಕಾದುನೋಡಬೇಕು.
ಕಾಂಗ್ರೆಸ್‍ನ ಬಹುತೇಕ ಸದಸ್ಯರು ಸಹ “ಜೆಡಿಎಸ್‍ನಿಂದ ಲಲಿತಾ ರವೀಶ್ ಅವರೇ ಮೇಯರ್ ಆಗಲಿ” ಎಂಬ ಆಶಯ ಹೊಂದಿದ್ದಾರೆಂಬುದು ಪಾಲಿಕೆಯ ರಾಜಕೀಯದಲ್ಲಿ ಭಾರಿ ಕೌತುಕ ಮೂಡಿಸಿದೆ. ಒಂದು ವೇಳೆ ಜೆಡಿಎಸ್‍ನಿಂದ ಲಲಿತಾ ರವೀಶ್ ಅವರ ಬದಲು ಬೇರೆಯವರ ಹೆಸರನ್ನು ಮುಂದಿಟ್ಟರೆ, ಕಾಂಗ್ರೆಸ್ ಸದಸ್ಯರ ಒಂದು ಗುಂಪು ಅದನ್ನು ವಿರೋಧಿಸಿ ಬಿಜೆಪಿಯ ಕಡೆ ವಾಲುತ್ತದೆಂಬ ಹಾಗೂ ಆಮೂಲಕ ಬಿಜೆಪಿ ಬೆಂಬಲ ಪಡೆದುಕೊಂಡು ಮೇಯರ್ ಸ್ಥಾನವನ್ನು ಪಡೆದುಕೊಳ್ಳುತ್ತದೆಂಬ ಒಳರಾಜಕೀಯ ಬೆಳವಣಿಗೆಗಳೂ ನಡೆಯುವ ಸಂಭವ ಇದೆಯೆಂಬುದು ಕದನ ಕುತೂಹಲ ಉಂಟು ಮಾಡಿದೆ. ಈಗ ಎಲ್ಲರೂ ತುಮಕೂರು ಪಾಲಿಕೆಯಲ್ಲಿ ಮೇಯರ್ -ಉಪಮೇಯರ್ “ಚುನಾವಣಾ ವೇಳಾಪಟ್ಟಿ” ಹಾಕುವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಆ ಬಳಿಕ ರಾಜಕೀಯವು ರಂಗೇರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
